Monday, September 10, 2012

ಕನಸಾವತರಣ

ಕನಸು ಒಂದು ಕನಸಿನಲ್ಲಿ ಮೈಯ್ಯ ತಾಳಿತು

ಮುನಿಸು ಭಾವ ಸ್ಪಷ್ಟವಾಗಿ ಭಾಸವಾಯಿತು

ಕೋಪದಿಂದ ಬುಸುಗುಡುತ ಕನಸು ಬಂದು ಕುಂತಿತು

ಮೂಧರೊಡನೆ ಮಾತು ಸಲ್ಲ, ಮೌನ ಲೇಸು ಎಂದಿತು



ಬಿಕ್ಕೋ ಕನಸು ಅಶಕ್ತವೆಂಬ ಮಾತು ನಿನ್ನದಾ?

ಬೀಳೋ ಕನಸು ಕೀಳು ಎಂಬ ಕಣ್ಣು ನಿನ್ನದಾ?

ಸ್ಫೂರ್ತಿ ರೂಪಿ ತಾಯಿ ನಾನು, ಪರಾವಲಂಬಿ ಎಂದೆಯಾ?

ತಾಯಿಗೆ ಉಣಿಸಿ ಬೆಳೆಸುವಷ್ಟು ಹಿರಿಯನಾದೆಯಾ?



ನೋಡು ಒಮ್ಮೆ ಅವತಾರವನ್ನು ಅಂತ ಕಣ್ಣು ಎಂದಿತು

ಪಾಪಿ ಕಣ್ಣು ನೋಡಲಾರದೆಂದು ಮನಸು ತಿಳಿಸಿತು

ಮನಸು ಹೊಕ್ಕು ಆಕೆ ಕ್ರೋಧವೆಲ್ಲ, ಏನೇನೊ ಆಯಿತು

ಪಾಪವೆಲ್ಲಾ ಕಣ್ಣೀರು ಆಗಿ ಹೊರಗೆ ಹರಿಯಿತು



ಮೌಡ್ಯವೆಲ್ಲ ಕನಸ ತಾಯಿ ಚರಣಕೆರಗಿ ನಿಂತಿತು

ಪಾಪ ಪ್ರಜ್ಞೆಯಿಂದ ಮೈಲಿ ಮಿಂಚು ಮೂಡಿತು

ಅಧಪಾತವನ್ನು ಅವತಾರವೆಂದ ಕವಿ ಮಾತು ಅರ್ಥವಾಯಿತು

ತಾಯಿ ಸಿಟ್ಟು ಕೂಡ ಒಡನೆ ಮಾಯವಾಯಿತು



'ಕನಸು ಬಿತ್ತು' ಎನ್ನೋ ಬಾಯಿ ಬಿದ್ದು ಹೋಯಿತು

ಕನಸಾವತರಣ ಕಂಡ ಮನಸು ಹಿಗ್ಗಿ ಹಾರಿತು

No comments: