Thursday, November 10, 2011

ಭಾವ: "ಲಿಂಗೈಕ್ಯ " ವಾಗಲು ಜೀವ ತೊರೆಯುವ ಅಗತ್ಯವಿಲ್ಲ. ನಾನು ಬಾಳು ಬಾಳುವ ರೀತಿಯೇ ಸಾಕ್ಷಾತ್ಕಾರಕ್ಕೆ ದಾರಿ.




ಕವಿತೆಯಲ್ಲಿ ಶಿವನು ಹಲವು ರೂಪಗಳಲ್ಲಿ ಬರುತ್ತಿದ್ದಾನೆ. ಯಾಕೆಂದರೆ, ಶಿವನು ನಮಗೆ, ಸಂಸಾರದಲ್ಲೂ ಹಾಗೂ ಸ್ಮಶಾನದಲ್ಲೂ, ಈ ಎರಡೂ ಕಡೆಯೂ ನಮಗೆ ಅಧ್ಯಾತ್ಮದ ಪಾಠ ಕಲಿಸುವ ಏಕೈಕ ದೇವರು.

ಅವನು ಹೆಂಡತಿ ಮಕ್ಕಳು ಜೋತೆಗಿದ್ದಾಗಲೂ ಹಾಗೂ ಸ್ಮಶಾನದಲ್ಲಿ ಬೈರಾಗಿ ಆದಾಗಲೂ ಅಧ್ಯಾತ್ಮವನ್ನು ಹೇಗೆ ನಿಭಾಯಿಸಬೇಕು ಅಂತ ಹೇಳಿ ಕೊಟ್ಟಿದ್ದಾನೆ.



ಈ ಕವಿತೆಯಲ್ಲಿ ಕೂಡ ಕೆಲವು ವಾಕ್ಯಗಳಿಗೆ ಹಲವು ಅರ್ಥಗಳು ಇರುವ ಹಾಗೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿವಿಧಾರ್ಥಗಳನ್ನು ಕವಿತೆಯ ಕೆಳಗೆ ವಿವರಿಸಿದ್ದೇನೆ.





ಬಾರೋ ಬಾಳೇ ಪರಾಕು ನಿನಗೆ

ಹಾಳಾದರೆ ಬರಿ ಹಾಳೇ ನಿನಗೆ



ಮಂದ ದೇಹದಲಿ, ಅಂಧ ಹೃದಯವಿದು

ಚಂದ ಚಂದ ಮನವು

ಸಂದ ಕಡಲಿನಲಿ, ಮಿಂದ ಮನಕೆ

ಪ್ರಜ್ಞ್ಯಾ ಪ್ರಸಾದ ನಿಜವು



ಓ ನನ್ನ ಶಿವನೆ, ಬಾ ಎಂದು ಒಡನೆ

ಬರಬೇಕು ಬೇಕು ನೀನು

ನಾ ನಿನ್ನ ನೋಡಲು, ನಿನ್ನ ಸೇರಲು

ಜವನ ದಾಟಬೇಕೆನು?



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ

ಇದು ನನ್ನ ಪಕ್ಷಿ, ಇದು ನನ್ನ ಅಕ್ಷಿ

ಹಾರೀತೋ ಬಾಳಿ ಬಾಳಿ



ನನ್ನ ಚಿತ್ತವು ಚಿತ್ರಿಸೋ ಚಿತ್ರವೂ ನೀನು

ಬಾಳೆಂಬುದಕೆ ಅರ್ಥವೂ ನೀನು

ಜೊಂಪನು ಕಂಪಿಸೋ ರುದ್ರನು ನೀನು

ಬಾಳು ಬೆಳಗಲು ಭದ್ರನು ನೀನು





ಹಾಳಾದರೆ ಬರಿ ಹಾಳೇ ನಿನಗೆ (೨ ಅರ್ಥ):

೧. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ, ನೀನೂ, ನಿನ್ನ ಘನತೆಯೂ ಹಾಳಾದಂತೆ.

೨. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ. ನನ್ನ ಬಾಳು ಖಾಲಿ ಹಾಳೆಯಂತೆ. ಅದನ್ನು ತುಂಬಿಸುವ ಎಲ್ಲ ಜವಾಬ್ದಾರಿಯೂ ನಿನ್ನದೇ.ಶರಣಾಗತಿ ಭಾವ.



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ (೨ ಅರ್ಥ):

೧. ಪ್ರಾಣ ಪಕ್ಷಿ ಹಾರಿಹೋಗಿ, ಜೀವ ಹೊರಟು ಹೋಗಿ. ಅದು ಲಿಂಗೈಕ್ಯ ವಾಗುವುದು.

೨. ಧ್ಯಾನ ಮಾಡುವಾಗ, ಪ್ರಾಣ/ಉಸಿರಿನ ಮೇಲೆ ಗಮನ ಇಟ್ಟುಕೊಂಡಾಗ. ಪ್ರಾಣ ರೂಪಿಯಾದ ಪಕ್ಷಿ, ನಮ್ಮ ದೇಹದ ಹೊರಗೂ ಒಳಗೂ ಹಾರುತ್ತಿರುವಾಗ ಆಗುವ ಜ್ಞಾನೋದಯ ಕೂಡ ಲಿಂಗೈಕ್ಯಾನುಭೂತಿಯೇ ಸರಿ.



ಬಾಳು ಬೆಳಗಲು ಭದ್ರನು ನೀನು (೨ ಅರ್ಥ):

೧. ನನ್ನ ಬಾಳು ಬೆಳಗಲು, ಹೇ ಶಿವನೆ ನೀನೆ ಬೇಕು.

೨. ನನ್ನ ಬಾಳು ಬೆಳಗಿದರೆ, ನಿನ್ನ ಘನತೆಯೂ ಭದ್ರ.





ಕರೆ ಕಲ್ಲ ನೀನು ಕೈಯಾಗ ಹಿಡಿದು, ಲಿಂಗಂತಿಯಲ್ಲೋ ಖೋಡಿ


ಖರೆ ಹೇಳು ನೀನು ತಿಳಿದೀಯೇನು ಇದರಾಗ ಇರೋ ಮೋಡಿ



ಭಕ್ತಿ ಉಂಡ ಕರೆ ಕಲ್ಲು ಕೂಡ ಲಿಂಗಾಗತೈತಿ ಅಣ್ಣಾ

ಬರೆ ಬೆವರನುಂಡು ಅದು ಬೆಂಡು ಬೆಂಡು, ನಾರತೈತಿ ಹುಣ್ಣಾ



ಓಲ್ಯಾಡಬೇಕು, ತೂರ್ಯಾಡಬೇಕು, ಲಿಂಗಕ್ಕ ಮತ್ತು ಬಂದು

ಎದೆಗೂಡಿನಾಗ ಉಕ್ಕಿ-ಸೂಸೋ ಭಕ್ತಿ ರಸವನುಂಡು



ನಿನ್ನ ಮನಸಿನ್ಯಾಗ ಆ ಭಕ್ತಿ ಇದ್ದು, ನಿನ್ನ ಕನಸಿನ್ಯಾಗ ಆ ಶಕ್ತಿ ಇದ್ದು, ನೀ ಮಸೆದು ಬಿಡು ಅದನಾ

ಅದೋ ಬಂದ ಬೂದಿ ಭಂಡಾರ ಬಳಿದು ನೀ ಆಗಿಬಿಡು ಶಿವನಾ

ಅಂಗಾರ ಉಟುಕೊಂಡು, ಹ್ಯಾಂಗಾರ ಕೂತಾಳು


ಮುಂಗಾರಿಗಾಗೀಯೇ ಕಾದಾಳೋ



ತವರಿಂದ ಬರತೈತಿ, ಜಳಕಾವ ಏರಿತೈತಿ

ಎಳಕಲ್ಲು ಹಸಿರು ಉಡೆ, ಉಡಿ ತುಮ್ಬತೈತಿ



ಅಂಬರದಾಗ ಅಭಂಗ ಗಾನ

ಹಾಡುತ ಬಂತು ಮೋಡವು ನಾ ನಾ



ಅಂಗಳದಾಗ ಮಂಗಳ ಮೂಡಿ

ತಿಂಗಳ ಕಂಗಳ ಬಂಡಿಯು ಕಂಡಿ



ಮಿಂಚಿನಾ ಅಂಚು, ಸೀರೆಗೆ ಕಾಣಾ

ವಜ್ರಾಯುಧವಾ ಹೊಲಿದೆ ಏನಾ?



ತಾಯಿಯ ತವರಿನ ಸೊಬಗನು ನೋಡಾ

ನವಿಲಿನ ಹಾಂಗಾ ನೀನೂ ಆಡಾ



ಮೋಡದಾಗಾ ಮ್ಯಾಳಾ ಮಾಡಿ

ಮಿಂಚಿನಾಗಾ ಬೆಳಕಾ ಮೂಡಿ



ಉಡಿಯಾಗ ಕಟ್ಟಾಳೋ ಎಲೆ ಅಕ್ಕಿ ಹಣ್ಣಾಕಿ

ಉಣ್ಣಾಕ ಕಾಯಿತಾವ ಮರಿ ಆಕಿ ಹಡೆದಾಕಿ

ಗುರು ನಮನ

ಮಣ್ಣಿನಾ ಕಣ್ಣಾಗ ಕಳೆಯನ್ನು ತುಂಬಿದಾ ಗುರುವೇ ನಿನಗ ಶರಣು

ದೇಹದಾ ಕಣಕಕ್ಕ ಹೂರಣಾ ತುಂಬೀದ ಬೆಳಕೇ ನಿನಗೂ ಶರಣು



ಚಿಗುರೀಗ ಒಡೆದೈತಿ, ಮರವಾಗಿ ಬೆಳಿತೈತಿ, ಇರಲು ನಿನ್ನ ಕರುಣಾ

ಭವ ದಾಟಿ, ಜವ ದಾಟಿ, ನಾ ಬರುವ ಈ ಧಾಟಿಗಿಲ್ಲ ಇನ್ನು ಮರಣಾ



ಆಂತರ್ಯಕೆ ಅಮೃತದಂದಾ ತಂದಾ ತಂದೆಗಿಲ್ಲ ಆಡಂಬರಾ

ಅಮೃತಧಾರೆಯ ಹಿಡಿದು, ಅಂತಃಪುರಕೆ ಬಾ ಅಂದೆಯಾ ಔದುಂಬರಾ ?



ನನ್ನೊಳಗಿನೊಳಗೆ ನೀ ಬೆಳಗು ಬೆಳಕೇ, ಓ ಗುರುವೇ ನೀನು ಬಂದು

ನಿನ್ನ ಚರಣದರುಣದಲಿ ಇರುವ ಬೆಳಕು, ಕರುಣೆಯಾಗಿ ನನ್ನ ಮಿಂದು