Tuesday, February 28, 2012

ಕಣ್ಗುಟುಕು ಕೋರಿ ಕುಂತಿರುವೆ ಗುರುವೆ ನಿನಗಿರಲಿ ಕೊಂಚ ಕರುಣಾ


ಬಾನ್ಗಣ್ಣ ತೆರೆದು ಒಳಗಣ್ಣಿಗುಣಿಸೋ ನೀ ತಮವ ಹಿಂಗೋ ಕಿರಣ



ಬಾನ್ಗಡಲ ಒಡಲ ಬಸಿರಿಂದ ಬಸಿದು ಬರಬೇಕು ದೇವ ಕಿರಣ

ತಾನ್ಹೊಕ್ಕಿ ನಾನ್ಹೀರಿದಾ ಸತ್ತ್ವವೆಲ್ಲವೂ ಬೆಳಕು ಬಿಳಿ ಪೂರಣ



ಜಗದಿರುಳ ಗರ್ಭದಿ, ನೀನಿರಲು ಎನ್ಜೊತೆ, ನಿಜ ಒಳಬಿಂಬ ತೋರೋ ಕಿರಣ

ಮಣ್ಧೂಳು ಬಾನೆಲ್ಲ ಕವಿದಿರಲು, ನೀನಿರಲು ನಿಜ ಬಾನ್ಬಣ್ಣ ಕಂಡೆ ಕಿರಣ



ವಿವರಣೆ:

ಆಧ್ಯಾತ್ಮದ ಮನೆಯಿಂದ ಶುರುವಾದ ಈ ಕವಿತೆ, ಸಾಗುತ್ತಾ ಹೋದಂಗೆ, ನನಗೇ ಅಚ್ಚರಿ ಆಗುವಂಥ ಒಂದು ರೂಪ ತಳೆದು ನನ್ನೆದುರಿಗೆ ನಿಂತುಕೊಂಡಿತು.

ಇದರ ಮೂಲ ಅರ್ಥ 'ಗುರು ನಮನ' ವೇ ಆಗಿದ್ದು, ಇದರಲ್ಲಿ ಇನ್ನೊಂದು ವಿಶಿಷ್ಟ ವೈಜ್ಞ್ಯಾನಿಕ ಅಂಶವೂ ಇದೆ ಅನ್ನುವುದು ನನ್ನ ಊಹೆ.

ಕೆಳಗಿನ ವಿವರಗಳು, 'ಕೊಳಿಗಿಂತಾ ಮಸಾಲೆ ಹೆಚ್ಚು' ಅನ್ನುವ ಹಾಗಿದೆ ಅಂತ ಅನಿಸಬಹುದು. ಆದರೆ ನಾನು ಈ ಕವಿತೆಗೆ ನ್ಯಾಯ ಮಾಡಬೇಕೆಂದರೆ ಇದನ್ನು ಇಲ್ಲಿ ಹೇಳಲೇ ಬೇಕು.

ಇದರ ಮೊದಲ ಎರಡು ಸಾಲುಗಳು, ಖೆಮೊಥೆರಪಿಗೆ ಒಳಗಾದ ವ್ಯಕ್ತಿಯು ಆ ಕಿರಣಗಳನ್ನೇ ದೇವರೆಂದು ಭಾವಿಸಿ ಆಡಿದ ಮಾತುಗಳಂತೆ ತೋರಿಬರುತ್ತವೆ.

ಕಣ್ಗುಟುಕು: ಕಣಗಳ ಗುಟುಕು

ಇರಲಿ ಕೊಂಚ ಕರುಣಾ: ಖೆಮೊಥೆರಪಿ ಒಂದು ನೋವಾಗುವಂತಹ ಕ್ರಿಯೆ. ಹೇ ಕಿರಣವೆ ನನ್ನ ಮೇಲೆ ಕೊಂಚ ಕರುಣೆ ಇಟ್ಟು ನನಗೇ ಕಡಿಮೆ ನೋವು ಮಾಡು ಎನ್ನುವ ಅರ್ಥ.

ತಮವ ಹಿಂಗೋ ಕಿರಣ: ಕೆಟ್ಟ ಕಣಗಳನ್ನು ನಾಶ ಪಡಿಸುವ ಕಿರಣ

ನಂತರದ ಎರಡು ಸಾಲುಗಳು, ಕ್ಷ-ಕಿರಣಗಳ ವರ್ತನೆಯನ್ನು ಸೂಚಿಸುವ ಹಾಗೆ ಅನಿಸುತ್ತದೆ.

ಬಾನ್ಗಡಲ ಒಡಲ ಬಸಿರಿಂದ : ಕ್ಷ ಕಿರಣಗಳು ಒಂದು ನಿರ್ವಾತ ಪ್ರದೇಶದಲ್ಲಿ ಹುಟ್ಟುತ್ತವೆ. ಅದು ನಮ್ಮನ್ನು ಹೊಕ್ಕಿದಾಗ ಆ ಕಿರಣಗಳನ್ನು ಹೀರಿದಾ ಅಂಶವೆಲ್ಲ ಬಿಳಿ ಹಾಗು ಹೀರದ್ದು ಎಲ್ಲಾ ಕಪ್ಪಾಗಿರುತ್ತದೆ.

ಕೊನೆಯ ಎರಡು ಸಾಲುಗಳು, ಇನ್ಫ್ರಾರೆಡ್ ಕಿರಣಗಳ ವರ್ತನೆಯನ್ನು ಸೂಚಿಸುತ್ತವೆ ಎನ್ನುವುದು ನನ್ನ ಊಹೆ.

ಐದನೆಯ ಸಾಲಿನಲ್ಲಿ ಅದು ಕತ್ತಲೆಯಲ್ಲಿ ನಿಜ ಬಿಂಬ ತೋರುವಾ ಪರಿ ಹಾಗು

ಆರನೇ ಸಾಲಿನಲ್ಲಿ ಅಂತರಿಕ್ಷದಲ್ಲಿ ವಿಜ್ಞಾನಿಗಳು ಈ ಕಿರಣವನ್ನು ಧೂಳಿನಿಂದ ಮುಚ್ಚಿದ ತಾರೆಗಳನ್ನು ನೋಡಲು ಬಳಸುವ ರೀತಿಯಾ ಬಗ್ಗೆ.

ಈ ಎರಡು ನಿಲುವುಗಳ ಸೂಕ್ತಾಸೂಕ್ತತೆ ಎಷ್ಟು ಸಮಂಜಸವೋ ನನಗೇ ತಿಳಿಯದು. ನಿಮ್ಮ ಅಭಿಪ್ರಾಯ ಹಾಗು ಟೀಕೆಗಳನ್ನು ದಯವಿಟ್ಟು ತಿಳಿಸಿ.

ಇದೇ ಸಂಧರ್ಭದಲ್ಲಿ ಇನ್ನೊಂದು ಮಾತು. ಈ ಕವಿತೆ ಬರೆಯುವಾಗ ಕ್ಷ-ಕಿರಣಗಳಿಗೂ ಹಾಗೂ ಆಧ್ಯಾತ್ಮಕ್ಕೂ ಇರುವ ಹಲವು ಹೋಲಿಕೆಗಳು ಬೆಳಕಿಗೆ ಬಂದವು. ಅದರ ಬಗ್ಗೆ ಇನ್ನು ಸ್ವಲ್ಪ ದಿನಗಳಲ್ಲಿ ಪ್ರಕಟಿಸುವೆ. ನಿಮಗೂ ಅದು ಇಷ್ಟವಾಗಬಹುದು ಎನ್ನುವುದು ನನ್ನ ಅನಿಸಿಕೆ.

Sunday, February 19, 2012

ಕಲ್ಗುಡಿಯಾಗ ಕಣ್ತೆರೆಕೊಂಡು


ಕುಂತಾಳ ನೋಡೋ ನಮ್ಮವ್ವ

ಬೆನ್ನು ತುಂಬಾ ಕಣ್ಹೊತ್ಕೊಂಡು

ಬೆನ್ನಿಗೆ ನಿಂತಾಳ ದುರ್ಗವ್ವ



ಬಾಳು ನಿನ್ನ ಕಾಲಡಿಯಲ್ಲಿ

ಬಿದ್ದದ ನೋಡೇ ನಮ್ಮವ್ವ

ಅದಕಿಂತ ಮಾನ ಬೇರೆಯಾವ

ಜಾಗದಾಗೇ ದುರ್ಗವ್ವ



ತಾಯ್ಮನಿ ಬಿಟ್ಟು ಹೊರಟೇನಿಂದು

ಯಾವ್ಮನಿಗೆಂದು ತಿಳೀಡವ್ವ

ಅಳಾಕ ಎರಡೇ ಕಣ್ಣು ನನಗೆ

ನೂರು ನಿನಗೆ ಕಣ್ಣವ್ವ



ಮಕ್ಕಳ ನೋಡೋ ಆಸೆ ನಿನಗೆ

ನಾಳೆ ಏನಾರ್ ಬಂದ್ರವ್ವ.....

ಮನಸಿನ ಬಾಗಿಲ ತೆರೆಕೊಂಡ್ ನಾನು

ಕೂತಿರ್ತೇನೆ ಬಾರವ್ವ.....



ನಿನ್ ಮನಿ ಬಿಟ್ಟು ಹೋಗ್ತೀನೆಂದು

ಮುನಿಸೀಕೊಳಬೇಡವ್ವ

ಅಂತ ಅಂದ್ರ...ಜಗವೇ ನನ್ನ ಹೊಟ್ಟಿ ಒಳಗಾ

ಐತೆ ಮಗನಾ ಅಂದ್ಯವ್ವ....?

ಗರಿ ಗೆದರಿ ನಿಂತ ಗುರುವೆಂಬ ಭಾವ


ಹ್ರುದ್ರಂಗದಲ್ಲಿ ಕುಣಿದು

ಅಂತರಾತ್ಮ ನೂಪುರವು ಕಟ್ಟಿ ಹಾರಿ

ಕುಣಿದು ಕುಣಿದು



ಒಳಗುಡಿಯ ಘಂಟೆಗಳ ಘಂಟ ನಾದ

ಒಳಗಿವಿಯ ಮೇಲೆ ಬಡಿದು

ಬಾಳ ತಾಳ ಆ ಶ್ರುತಿಯ ಹಿಡಿದು

ಭಾವ ಗೀತೆಯಾಗಿ ಹರಿದು



ಅರೆ ಅರಿತ ಅರಿವಿನಾ ಅರಿವಿಗಿಂದು

ಗುರು ದೀಪ ಹಿಡಿದು ಬಂದ

ಆ ಬೆಳಕ ಬಳಕಿನಲಿ ಬೆಳಗಿ ಬಂದ

ನಾ.... ಶ್ರೀ ಅರವಿಂದನೆಂದ