Thursday, June 17, 2010

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ



ಮುನ್ನುಡಿ: ಆತ್ಮವು...ತನ್ನನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ಕಾಯುತ್ತಿದೆ.......
ಅಂಧಕಾರವೇ...ತುಂಬಿದ ಈ ಬಾಳಲಿ....ಆ ಬೆಳಕಿಗೆ ಕಾಯುತ್ತಿದೆ.......
ಸಹಸ್ರಾರು ವರ್ಷಗಳಿಂದ....ಒಂದಲ್ಲ ಇನ್ನೊಂದು ನಶ್ವರ ದೇಹದಲಿ ಬಂಧಿಯಾಗಿದೆ.......
ಈ ಸುತ್ತಾಟ ಸಾಕು....ಬಾ....ಎಂದು ಆತ್ಮವು ಕೂಗಿದಾಗ........
ಅದು ಕವಿಗೆ ಹೀಗೆ ಕಂಡಿತು......






ಕಾಲದಿಂದಲೂ ಕಾದಿಹವು ಕಂಗಳಿವು ನಿನಗೆ
ಎಂದು ಮೂಡುವುದೋ ಆ ಬೆಳಕು ಎಂದು ಕಾಯುತ
ಕುಳಿತಿಹೆ ನಿಷೆಯೋಳು ಹೊಸ್ತಿಲಲಿ, ಆ ಗಾಡಾನ್ಧಕಾರದ ಪಥವನ್ನು ದಿಟ್ಟಿಸುತ
ಎಂದು ಬರುವುದೋ ಆ ಬೆಳಕು ನನ್ನ ಗುಡಿಸಲಿಗೆ ಎಂದು ನಿಟ್ಟುಸಿರಿಡುತ

ಸಹಸ್ರ ಗ್ರೀಷ್ಮಗಳು ಸುಟ್ಟರೂ ಬಾಡದಿಹ ಬಳ್ಳಿಯಿದು
ಹೂವನೋತ್ತು ನಲಿಯುತಿಹುದು ಬರುವುದು ಆ ದುಂಬಿ ಎಂದು ಕಾಯುತ
ಸಹಸ್ರ ಆಶಾಢಗಳಿಗೂ ನಂದಲಾರದ ದೀಪವದು
ಉರಿಯುತಿಹುದು ಸಿಗುವುದು ತನಗೆ ಆ ಬೆಳಕು ಎಂದು..... ಎಂದು ಕಾಯುತ

ಸಂಸಾರ ಸಾಗರದೊಳು ಮಿಂದು ಬೆಂದಿಹೆ ನಾನು, ಮುಪ್ಪಾಗಿಹುದು ಈ ಮೇಲ್ಪದರ
ಹುಟ್ಟು ಸಾವಿನ ಚಕ್ರದೊಳು ಸುತ್ತಿ ಬಾಯಾರುತಿಹೆ ನಾನು

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ
ಹೂವು ಉದುರುವ ಮುನ್ನ, ದೀಪವು ನಂದುವ ಮುನ್ನ

ನಿನ್ನನು ಸೇರಲು ಬರುತಿಹೆ ನಾನು........



ಮುನ್ನುಡಿ: ಆತ್ಮವು...ಪರಿಪಕ್ವ ಆದಾಗ.....ಆ ಮಹಾ ಶಕ್ತಿಯು....ಅದರಲ್ಲಿ ಅವತರಿಸುವುದೆಂದು ಹೇಳುತ್ತಾರೆ......
ಹಾಗೆ ಅವತರಿಸುವ ಕೊಂಚ ಮುನ್ನ....ಅವತರಿಸುವ ವೇಳೆ...ಹಾಗು ಅವತರಿಸಿದ ನಂತರ.....
ಆ ಕ್ಷಣಾರ್ಧದಲ್ಲಿ ..........ಮನಸ್ಸಿನಲ್ಲಿ ಹಾಗು ದೇಹದಲ್ಲಿ ಆಗುವ ಅನುಭವಗಳ ಒಂದು ನೆರಳು ಇದು.....




ಗರಿಗೆದರಿ ಕುಣಿಯುತಿಹಳು ಮನಮಯೂರಿ
ಜ್ಞಾನಗಂಗೆಯು ವೃಷ್ಟಿ ರೂಪದೊಳು ಅವತರಿಪಳೆಂದು ತಿಳಿದು
ಭೋರ್ಗರೆದು ಉಕ್ಕುತಿಹುದು ಒಳಗಡಲು
ತಾಳುವೆನೆ...... ಆ ಅವತರಿಪ ಶಕ್ತಿಯನ್ನು ಎಂದು ತಿಳಿಯದು

ಶುಭ್ರವಾದ ಶಕ್ತಿಯದು ಧುಮುಕುತಿಹುದು ನನ್ನೆಡೆಗೆ
ತೊಳಿಯುತಿಹುದು ಒಳಗುಡಿಯನ್ನು, ಕರಗಿಸುತಿಹುದು ಮಲಿನ ಮೂರ್ತಿಯನು
ಕಳಚಿದೆ ಸೆರೆಯು,ಮೂಡಿದೆ ಬೆಳಕು
ಸಾಕು ಇಂದು ನಿನಗೆ ಈ ದೇಹದ ಹಂಗು...ನಡೆ ನನ್ನೆಡೆಗೆ ಎನ್ನುತಿಹುದು

ಹರಿಯುತಿಹೆನು ನಾನು ಈ ಜ್ಞಾನಗಂಗೆಯೊಳು
ಕರೆದೊಯ್ಯುತಿಹುದು ಎಲ್ಲಿಗೆ ಇದು ಎನ್ನನು
ಮೂಡಲಾಚೆಗೆ ಹೊರಟಿಹೆ ನಾನು
ನಿನ್ನನು ಸೇರಲು ಬರುತಿಹೆ ನಾನು

ನಡೆ ನಡೆ ನೀ ಗುರಿಯೆಡೆಗೆ.....



ಮುನ್ನುಡಿ: ನಮಗೆ ಇರುವ ಸಾಮರ್ಥ್ಯವನ್ನು ನಾವು ಅರಿಯದೆ....ನಮ್ಮ ಮನಸ್ಸನ್ನು ನೋಡಲು ಸಹ ಧೈರ್ಯವಿಲ್ಲದ ನಮಗೆ ......ಒಂದು ನಿರರ್ಥಕವಾದ, ಸಾರ್ಥಕತೆ ಇಲ್ಲದ ಜೀವನ ನಡೆಸುವ ಇಂದಿನ ಸಮಾಜಕ್ಕೆ....
ತಾಯಿ ತಂದೆ,ಗುರು ಹಿರಿಯರು....ಇವರ ಮಾರ್ಗದರ್ಶನವನ್ನು ತಿರಸ್ಕರಿಸಿ ನಡೆಯುತ್ತಿರುವ ಸಮಾಜಕ್ಕೆ.....ಗುರಿಯ ತೋರಿಸಲು ಅವರ ಅವಶ್ಯಕತೆ ಇದೆ.....




ಹೆದರಬೇಡ ನೀ ಕಣ್ಣಬಿಡೋ .....
ಒಳಹೊಕ್ಕು ನಿನ್ನನು ನೀನು ನೋಡೂ....
ಒಳಗೆ ಚೇತನವು ಒಂದಿಹುದೋ ....
ನಿನ್ನ ಲಕ್ಷ್ಯಕೆ ಕಾದಿಹುದೋ ....
ಕೋಟಿ ಲಿಂಗಗಳ ಶಕ್ತಿ ಅದೂ...
ಸುಪ್ತವಾಗಿ ಏಕೆ ಕುಳಿತಿಹುದೋ....

ಎದ್ದು ನಡೆ ನೀ ಗುರುವೆಡೆಗೆ....
ತೋರುವ ದಾರಿ ಅವ, ಅವನೆಡೆಗೆ...
ಸ್ಪರ್ಶಿಸಿ ತಂದೆಯ ಕಾಲ್ ಗಳಿಗೆ ....
ಅರ್ಪಿಸಿ ತಾಯಿಯ ಚರಣಗಳಿಗೆ......
ನಡೆ ನಡೆ ನೀ ಗುರಿಯೆಡೆಗೆ.....
ನಡೆ ನಡೆ ನೀ ಗುರಿಯೆಡೆಗೆ.....

ಇದೆ ಅಲ್ಲವೇ ಆಕೆಯ ಬಯಕೆ.....



ಮುನ್ನುಡಿ: ಜೀವನದುದ್ದಕ್ಕೂ....ದೇವರನು ಹುಡುಕಿ ಹೊರಟಾಗ....ಯಾವ ದಾರಿಯಲಿ ಅವನು ಸಿಗುವನು ಎಂದು ತಿಳಿಯದಿದ್ದಾಗ........
ಆತ್ಮಕ್ಕೆ ದೇಹವೇ ಒಂದು ಕರಾಗೃಹವು ಅಂತ ಎನಿಸಿದಾಗ.......ಅವನನ್ನು ಸೇರಲು....ಈ ದೇಹವನು ಬಿಟ್ಟು ಅದು ಹೋಗಬೇಕು ಎಂದನಿಸಿದಾಗ....






ಚಿಮ್ಮುತಿಹುದು ಚಿಲುಮೆಯೊಂದು ಒಳಮನಸ್ಸಿನಲಿ ಇಂದು
ಹೊರಟಿಹಳು ತನ್ನ ನಲ್ಲನರಸಿ ಹುಡುಕುತ ಬಳಕುತ ಇಂದು
ಶತಪಥ ಸಹಸ್ರ ಕವಲುಗಳ ದಾರಿಯೊಳು
ತನ್ನ ಇನಿಯನ ಆಲಿಸುತ ಹೊರಟಿಹಳು ಇಂದು

ಹಪಿಸುತಿಹುದು ಹಕ್ಕಿಯೊಂದು ಗೂಡುಬಿಟ್ಟು ಹಾರಲೆಂದು
ಕಡಲಾಚೆಗೆ, ಮುಗಿಲಾಚೆಗೆ, ನಿತ್ಯ ಪುಟಿಯುವ ರವಿ ಶಶಿಗಳಾಚೆಗೆ
ಸರಿಸು....... ಈ ಮಸಣ ಬೂಧಿಯನು ಇಂದು
ಬಿಡುಗಡೆಗೆ ಕಾದಿಹುದು ಒಳಗೆ ಕೆಂಡ ಒಂದು

ಸಾಕು ಈ ವಿರಹ......ತಾಳಲಾರೆ ಎಂದಳಾಕೆ
ಬಿಗಿದಪ್ಪಿ ಕರೆದೊಯ್ಯಿ ಆಕೆಯನು ನಿನ್ನ ಅಂತಃಪುರಕ್ಕೆ
ಲೀನವಾಗಲಿ ನಿನ್ನೋಳಗಾಕೆ
ಇದೆ ಅಲ್ಲವೇ ಆಕೆಯ ಬಯಕೆ.........

ದಿಗಂತ



ಮುನ್ನುಡಿ: ಒಳಮನಸ್ಸಿಗೆ .....ಸೃಷ್ಟಿಕರ್ತನ ಕೂಗು ಕೇಳಿಸಿದಾಗ........ಅದನ್ನು ಅರಸಿ ಹೋಗಬೇಕೋ .....ಇಲ್ಲವೋ.....ಅಂತ ತಿಳಿಯದಿದ್ದಾಗ........
ನನ್ನನು ನಾನು....ಅವನ ಹತ್ತಿರ ಹೋಗುವಷ್ಟು ಶುಭ್ರವಾಗಿ ಇಟ್ಟುಕೊಂಡಿದ್ದೇನ.....?..ಎಂಬುವ ಭಾವನೆ ಮನಸ್ಸಿನಲ್ಲಿ ಮೂಡಿದಾಗ........
ಹರಿದ ಸಾಲುಗಳಿವು......





ದೂರ ದಿಗಂತದೊಳು ಯಾರೋ ಎನ್ನ ಕೂಗುತಿಹರಾ........ತಿಳಿಯದು
ಒಳಗಡಲ ವೀಣೆಯನ್ನು ಮೀಟಿ ಅಲೆಗಳೆಬ್ಬಿಸುತಿಹರಾ.....ಕೇಳದು
ಕಳಚು ಈ ದೇಹಜಾಲವ, ಈಜು ನನ್ನೆಡೆಗೆ ಎಂಬುತಿಹರು ಯಾರದು......

ಈ ಮಲಿನ ಹೆಗ್ಗಡಲಾಚೆ ಈಜಲು ಸಾಧ್ಯವೇ ನನಗೆ.........ತಿಳಿಯದು
ಇದರ ದಾಟಿದ ಮೇಲೆಯೂ ನಾನು ಇರುವೆನೆ ಶುಭ್ರವು.......ಕಾಣದು
ನಿನ್ನೆಡೆ ಈಜಲು ಎನ್ನನು ಈಗ ದೂಡುತಿಹರು....ಯಾರದು......

ನಿನ್ನೋಳಗಿಂದ ಬಂದಿಹ ನನಗೆ
ನಿನ್ನನು ಸೇರಲು ಏಕೀ ಕಾತರ.......
ಎಲ್ಲರೂ ನೀನು ನಮ್ಮೋಳಗೆ ಎಂಬರು
ನಿನ್ನನು ಹುಡುಕಲೆಕೀ ಹಂಬಲ......

ಋಣಿ

ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸಲಹಿದ ಕಡಲಿಗೆ ಆ ಮುತ್ತು ಋಣಿ
ತನ್ನ ರಸವನ್ನೇ ಉಣಬಡಿಸಿದ ಹೂವಿಗೆ ಆ ದುಂಬಿ ಋಣಿ
ತನ್ನ ಮಡಿಲಲ್ಲಿ ಗೂಡಿಗೆ ಜಾಗ ಕೊಟ್ಟ ಮರಕ್ಕೆ ಆ ಹಕ್ಕಿ ಋಣಿ

ತಾನು ಸಲಹಿದ ಬಿಂದು ಮುತ್ತಾಯಿತೆಂಬ ಭಾವಕ್ಕೆ ಕಡಲು ಯಾರಿಗೆ ಋಣಿ
ತಾನು ಸಿಹಿ ಹಣ್ಣು ಆದೆನೆಂಬ ಸಾರ್ಥಕತೆಗೆ ಹೂವು ಯಾರಿಗೆ ಋಣಿ
ಒಂಟಿಯಾದ ಹೆಮ್ಮರಕ್ಕೆ ಹಾಡಿ ಮುದ ನೀಡಿದ ಹಕ್ಕಿಗೆ ಯಾರು ಋಣಿ

ನನ್ನೊಳಗೆ ನೀನಿರಿಸಿದ ಚೇತನಕ್ಕೆ ನಾನೂ....?
ಆ ಚೇತನಕ್ಕೆ ಮಾಧ್ಯಮವಾದ ನನಗೆ ಅದೋ.... ?
ನಮ್ಮಿಬ್ಬರ ಮಿಲನ ಮಾಡಿಸಿದ ನಿನಗೆ ನಾವೋ.....?
ನಿನ್ನನ್ನು ಆರೆಸಿ ಹೊರಟಿಹ ನಮಗೆ ನೀನೋ.....?

Tuesday, June 15, 2010

ರುದ್ರನು ತಾಂಡವವಾಡುವುದೆಂದು......?


ಮುನ್ನುಡಿ: ಈ ಕವನದಲ್ಲಿ......ಇಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿರುವಂತಹ ಒಂದು ಕರಾಳತೆಯ ಚಿತ್ರೀಕರಣವಿದೆ .........

ಕಾಡು ಎಂಬುದು....ಇಲ್ಲಿ ಸಮಾಜವನ್ನು ಪ್ರತಿಬಿಂಬಿಸುತ್ತದೆ.......

ಗುಡಿ ಎಂಬುದು......ನಮ್ಮ ದೇಹ.....

ಅದರೊಳಗೆ ಇರುವವನು.....ಆತ್ಮ....

ಕವಿಯ ಪ್ರಕಾರ ಇಂಥ ಒಂದು ಸಮಾಜವು..........ಪ್ರಳಯಕ್ಕೆ ಸಿದ್ಧವಾಗಿದೆ............

ಇಲ್ಲಿ ಪ್ರಳಯ ಎಂದರೆ.........ಅಧರ್ಮವನು ತೊಳೆಯುವ....ಹಾಗು ಹೊಸತಾದ ಹಾಗು ಶುಭ್ರವಾದ ಒಂದು ಸಮಾಜವನ್ನು ರಚಿಸುವುದಕ್ಕೆ ಮುನ್ನುಡಿ.........



ದಟ್ಟ ಕಾಡಿನ ನಡುವೆ, ಕಾರಗತ್ತಲೇ ಒಳಗೆ

ನಿಶಾಚರಿ ಚಂದ್ರನು ಅಂಜಿ ಅಡಗಿಹನು ಮೋಡದ ಕವದಿಯ ಒಳಗೆ

ಮಸಣ ಮೌನವು ತಬ್ಬಿಹುದು ಧರೆಯನು ಈ ಕ್ಷಣದೊಳು

ಮಾಟಗಾತಿಯ ನಗುವು ತುಂಬಿಹುದು ಮರುಕ್ಷಣದೊಳು



ಗುಡಿಯೊಂದಿಹುದು ಕಾಡಿನ ನಟ್ಟ ನಡುವೆ

ಬರಲಾದ ನ್ಯಾಯವೃಕ್ಷವು ನಿಂತಿಹುದು ಅದರ ಬದಿಗೆ

ಬಾವಲಿಗಳ ಹಿಂಡು ಸುತ್ತುತಿಹುದು ಗೊಪುರವನು

ನರ್ತಿಸುತಿಹವು ಕ್ಶುದ್ರಶಕ್ತಿಗಳು, ಮುತ್ತಿಹವು ಅಂಗಳವನು



ಗರ್ಭಗುಡಿಯ ಬಾಗಿಲು ಮುಚ್ಚಿಹುದು,

ಜೇಡರ ಬಲೆಯು ಅದನು ಅಪ್ಪಿಹುದು

ಧೂಳಿನ ಅಭಿಷೆಕವನು ಸ್ವೀಕರಿಸುತಿಹನವನು ಒಳಗೆ

ಕಣ್ಣ ಅಂಚಿನಲಿ ಭರವಸೆಯನಿಟ್ಟು ಕಾಯುತಿಹನು ಯಾರಿಗೆ



ಹುದುಗಿಹೋದ ಧರ್ಮದ ಜ್ವಲಾಮುಖಿಯೊಂದು ಕುದಿಯುತಿಹುದು ಇಂದು

ಸಿಡಿದು, ಸರಿದು, ಬಿರಿದು, ಹರಿದು. ಜರಿಯುವುದು ಎಂದು?

ರುದ್ರವೀಣೆಯು ನುಡಿಯುವುದು ಎಂದು?

ರುದ್ರನು ತಾಂಡವವಾಡುವುದೆಂದು ?

ಆರ್ನಾ



ಮುನ್ನುಡಿ: ನನ್ನ ಅಕ್ಕನ ಮಗಳ ಹೆಸರು - ಆರ್ನಾ(ಲಕ್ಷ್ಮಿ ದೇವಿಯ ಒಂದು ರೂಪ). ಆ ಮಗುವನ್ನು ಕಂಡ ಮೊದಲ ಬಾರಿ ನನ್ನೊಳಗೆ ಮೂಡಿದ ಭಾವನೆಗಳನ್ನೂ ಕ್ರೋಡೀಕರಿಸುವ ಒಂದು ಪ್ರಯತ್ನ ಇದು.

ಒಂದು ಜೀವವು ಬರುವುದಕ್ಕೆ ಮನುಷ್ಯರು ಅಥವಾ ಪ್ರಾಣಿಗಳು ನೆಪ ಮಾತ್ರ.......ಅದರ ನಿಜವಾದ ತಂದೆ ಪರಮಾತ್ಮ ಹಾಗು ತಾಯಿ ಪ್ರಕೃತಿ ಎಂಬ ಭಾವನೆ ಇದರೊಳಗಿದೆ.

ಹಳೆಗನ್ನಡದ ಕೆಲವು ಶಬ್ಧಗಳ ಪ್ರಯೋಗ ಇಲ್ಲಿ ಆಗಿರುವುದರಿಂದ, ತಮ್ಮ ಅನುಕೂಲಕ್ಕೆ ಅದರ ಶಬ್ಧಾರ್ಥಗಳನ್ನು, ಈ ಪುಟದ ಕೊನೆಯಲ್ಲಿ ಬರೆದಿದ್ದೇನೆ......


ದೇವರ ಕನಸೊಂದು ಬಂದಿಹುದು ಮನೆಗಿಂದು

ಸೃಷ್ಟಿಯ ಮಗಳಿವಳು ಬಂದಿಹಳು ಧರೆಗಿಂದು

ಪ್ರಕೃತಿ ಪರಮಾತ್ಮನ ಮಿಲನದಿಂ ಉದ್ಭವಿತ ಚೇತನವಿದು

ನಿನ್ನ ಕನಸ ಕಾಯುವ ಹೊಣೆಯು ಮಾತ್ರ ನನದು


ರವಿಯು ನೀಡಿಹನು ತೇಜಸ್ಸು ಈ ಮುಖಕೆ, ಶಶಿಯು ನೀಡಿಹನು ಕಾಂತಿ ಈ ಕಣ್ಣಿಗೆ

ಉಷೆಯು ನೀಡಿಹಳು ತನ್ನ ಸಿಂಧೂರದ ಕೆಂಪನ್ನು ತುಟಿಗೆ

ಹೊಮಾಗ್ನಿಯು ಹೊತ್ತಿಸಿಹುದು ದೀಪವು ಇವಳ ಒಳಗೆ

ಈ ದೀಪವ ಕಾಯುವ ಹೊಣೆಯು ಮಾತ್ರ ನನಗೆ


ನುಂಗೊರೋಲೋಳು ನುಡಿವೇಣಿ ಇಹಳು

ಪಣ್ಣನೆ ನಡೆತದೋಲ್ ಪಣೆಗಣ್ಣನಿಹನು

ಅಚ್ಚ ಅಚ್ಚರೆಯು ಆರ್ನೆಯು ಇವಳು

ಕರ್ಣದೊಲ್ ಪಿಸುಗುಡುತಿಹನು ಪದ್ಮನಾಭನು, ನಗುತಿಹಳು ಇವಳು


ಕೃತಜ್ಞತೆಗಳು ಈ ಹೊಣೆಗೆ ನಿನಗೆ

ಇದನು ಕಾಯುವ ಸ್ಥೈರ್ಯ ನೀಡು ನನಗೆ


ನುಂಗೊರೋಲೋಳು - ಮಧುರ ವಾದ ಕೊರಳೊಳು, ಮಧುರ ವಾದ ಕಂಠದೊಳಗೆ

ನುಡಿವೇಣಿ - ನುಡಿಯ ದೇವಿ, ವಾಗ್ದೇವಿ, ಸರಸ್ವತಿ

ಪಣ್ಣನೆ - ಮೆಲ್ಲಗೆ

ಪಣೆಗಣ್ಣ - ಪಣೆ - ಹಣೆ , ಹಣೆಯ ಮೇಲೆ ಕಣ್ಣು ಇರುವವ, ಶಿವ

ಅಚ್ಚ - ಶುದ್ಧ , ಪವಿತ್ರ

ಅಚ್ಚರೆ - ಹೆಣ್ಣು ದೇವತೆ

ಕವಿಯ ನಲ್ಲೆ......


ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ....

ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ ಭಾವನೆಯೇ....ವಿರಹವು ಅಂತ ಅನಿಸಿದಾಗ...ಮೂಡಿಬಂದ ಸಾಲುಗಳಿವು..........



ಇಷ್ಟು ಸನಿಹಕೆ ಬಂದು

ಮರೆಯಾದೆ ಏಕೆ ನಲ್ಲೆ

ಮನವನು ಕದಡಿ.......

ಮನಸನು ಮುದುಡಿ.......

ಹೊರಟೆ ಎಲ್ಲಿಗೆ

ಎಲೆ ನಲ್ಲೆ.......



ಪ್ರೇಮ ಪಾಶವ

ಬಿಗಿದು ಕೊರಳಿಗೆ

ಸರೆದರೆ ನೀನು

ಉಳಿಯೆನೆ ನಾನು.....?

ಕೂಗಿ ಕರೆಯಲಾರೆ

ನಿನ್ನನು ನಾನು

ಮನವು ತುಂಬಿಹುದು

ಕೊರಳು ತಂಗಿಹುದು

ಅರಿಯೆಯ ನೀನು.....



ನಗುತಿರುವ

ಎಲೆ ಚಂದ್ರನೇ ನೀನು

ನನ್ನ ರೂಪಸಿಯ

ನೀನೆ ಕರೆದೊಯ್ದೆಯೇನು

ಬಯಲಾಚೆಗೆ ಓಡುತಿರುವೆ

ಏಕೆ ವಾಯುವೆ ನೀನು

ಸ್ವರ್ಗದೊಳಿಹ ಅಪ್ಸರೆಯರು

ನಿನಗೆ ಸಾಲದೇನು



ಕೈಲಾಸದೊಳಿಂ ಕಣ್ಣ ಹಾಯಿಸು

ಶಿವನೆ ನೀನು

ದಕ್ಷ ಪುತ್ರಿಯು ಹೊರಟಾಗ

ಆದ ವಿರಹವನೂ ಮರೆತೆಯೇನು.....



ಸಾಧನೆಯ ಅಂಚಿನೊಳಿಹ

ಸಾಧಕನು ನಾನು

ಮುಕ್ಕಂಣನು ಮುನಿದರೂ

ನಿಲ್ಲುವೆನೆ ನಾನು.......?



ಕವಿಯ ನಲ್ಲೆ

ಎಲೆ ಕವನವೆ ನೀನು

ನನ್ನ ತೊರೆದರೂ ನೀನು.......

ನಿನ್ನನು ಬಿಡುವೆನೆ ನಾನು.....?

Sunday, June 13, 2010

ಇನ್ನೂ ಬರಬಾರದೇ.....


ಮುನ್ನುಡಿ: ರಾಧೆ ಮತ್ತು ಕೃಷ್ಣರ ಪ್ರೇಮವು.....ಶ್ರೆಷ್ಟಾತಿ ಶ್ರೇಷ್ಟ........ಪವಿತ್ರಾತಿ ಪವಿತ್ರ........
ಅವರ ಪ್ರೇಮಕ್ಕೆ.......ಸ್ಪರ್ಶದ ಹಂಗು ಇಲ್ಲ.... ಅದೇ ಅವರ ಪ್ರೇಮದ ಉತ್ಕುಷ್ಟತೆಯ ದ್ಯೋತಕ...
ಅಕೋ ಶ್ಯಾಮಾ....ಅವಳೇ ರಾಧೇ....ನಲಿಯುತಿಹರು ಕಾಣಿರೇ....
ಬನ್ನಿ.....ಅವರ ನಲಿವನು ಕಂಡು......ನಲಿಯುವ ನಮ್ಮ ಮನವನು ನೋಡೋಣಾ....



ಕರೆಯೇ ಕೋಗಿಲೆ
ನನ್ನ ಇನಿಯನ.......
ಮೊರೆಇಡುತಿದ್ದರು ....ನಾ...
ಮುನಿಸಿಕೊಂಡಿರುವನಾ.....

ಮನದ ಮಡಿಕೆಯಲಿ
ಭಾವನೆಗಳ ಮಜ್ಜಿಗೆಯ
ಕಡೆದವನನ.......
ತೇಲಿ ಬಂದ
ಒಲುಮೆಯ ಬೆಣ್ಣೆಯ
ಕದ್ದವನನ.......
ಕಳ್ಳ ಕೃಷ್ಣನಾ.......

ಸೂರ್ಯನು ಯಮುನೆಯ
ಕೆನ್ನೆಯ ಹಿಂಡಿ
ಕೆಂಪಾಗಿಸಿದಂತೆ.. .....ನಾ.....
ಅವನ ನೆರಳ ಸೋಕಿ
ಕೆಂಪಾಗಿರುವೆನಾ. .....?

ದಿಟ್ಟಿಯೋಳು ನನ್ನನು
ಮುಟ್ತುವನ.....
ಮುಟ್ಟದೆಯೇ....
ಮುಂಗುರುಳನು ನೇವರಿಸುವನ......

ಮನವು ಬರಿದಾಗಿದೆ.....
ಜಾರಿದ ಕಣ್ಣ ಬಿಂದುವು
ಕೆನ್ನೆಯ ಮೇಲೆ
ಗೆರೆ ಬರೆದಾಗಿದೆ......

ಹೃದಯದ ಒಳಗೆ
ಬರೆ...ತಾಗಿದೆ
ಕಣ ಕಣದಲ್ಲಿ
ನೀನು ಬೆರೆತಾಗಿದೆ
ಇನ್ನೂ ಬರಬಾರದೇ..... ?