Wednesday, July 28, 2010

ಗಂಡೆದೆಯ ತಟ್ಟಿ ತಟ್ಟಿ ಏಳಿ...

ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....

ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ Career Oriented ಆಗಿರೋದೆ ಆಕೆಯ ಬೇಸರಕ್ಕೆ ಕಾರಣ....

ಒಂದು ದೈಹಿಕವಾಗಿ ಹಾಗು ಮಾನಸಿಕವಾಗಿ ಸದೃಢ ಸಮಾಜವನ್ನು ಕಟ್ಟಲು ಕೊಡುವ ಕರೆ ಇದು.....

ಹಾಳು ಬಿದ್ದಿರುವ ನಮ್ಮ ಮನಸನ್ನು ಹೂತು ಹದ ಮಾಡುವುದಕ್ಕೆ ಇಟ್ಟ ಮೊರೆ ಇದು.....





ನಾ ಹಡೆದ ಮಕ್ಕಳು ನೀವು ನೂರು ಕೋಟಿ

ನನ್ನನೇ ಮುಗಿಸಲೆಂದು ನಿಮ್ಮ ಪೋಟಿ

ನನ್ನ ಪಣಕಿಟ್ಟಿಹಿರಿ ಇಂದು ಏಕೆ

ಪಾಂಡವರಿಗಿಂತ ನೀಚರಾದಿರೇಕೆ......

ಏಳಿ ಏಳಿ ಇನ್ನು ನೀವೆಲ್ಲ ಏಳಿ

ಮಲಗುವ ಸಮಯವಿದಲ್ಲ ಕೇಳಿ......



ಗಲ್ಲಿ ಗಲ್ಲಿಗಳಲ್ಲಿ

ಸಂದಿ ಗೊಂದಿಗಳಲ್ಲಿ

ಹೊರಳುವಾ ಹುಳುಗಳೆಲ್ಲ ಏಳಿ

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಜಟ್ಟಿ ಬಳಗವ ಕಟ್ಟಿ

ಸಮರ ದೀಕ್ಷೆಯ ತೊಟ್ಟಿ

ಶತ್ರು ಪಡೆಯನು ಮೆಟ್ಟಿ ಮೆಟ್ಟಿ ಏಳಿ...

ಗಂಡೆದೆಯ ತಟ್ಟಿ ತಟ್ಟಿ ಏಳಿ...

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಹಾಳು ಹೊಲವ ಹೂತು ನೀವು

ಬೆವರ ಜಳಕ ಮಾಡಿ ಏಳಿ...

ತಾಯಿಯನ್ನು ಮನದಲಿಟ್ಟು

ನಿತ್ಯ ಕರ್ಮ ಮಾಡಿ ಏಳಿ....

ತಾಯಿ ಕೂಗಿಗಿಂದು ನೀವು
ಎಲ್ಲರೂ ಓಗೊಟ್ಟು ಏಳಿ...


ಬನ್ನಿ ಬನ್ನಿ ನೀವು ಎದ್ದು

ತಾಯಿ ನಿಮ್ಮ ಕೂಗುತಿದ್ದು...

ಬನ್ನಿ ನೀವು ಪಗಡೆ ತೊರೆದು

ತಾಯಿಯನ್ನು ಉಳಿಸಲೆಂದು

ಏಳಿ ಏಳಿ ಎಲ್ಲ ಏಳಿ

ತಾಯಿ ಕೂಗ ಕೇಳಿ ಏಳಿ......

ಗಟ್ಟಿ ಗಟ್ಟಿಯಾಗಿ ಎಲ್ಲ
ಜಯ ಭಾರತಿ....ಎಂದು ಹೇಳಿ.....

ಇರಲೆಬೇಕಾ ಇಲ್ಲಿಯೇ....?

ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೇ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆಕೆ ಎಷ್ಟೋ ವರ್ಷಗಳ ಹಿಂದೆ ಅವನಿಗೆ ಕೊಟ್ಟಿದ್ದಳು....ಆ ಹೂವಿನ ಸುಗಂಧದಲ್ಲಿ ಅವನು ಆಕೆಯ ನೆನಪುಗಳನ್ನು ಹುಡುಕುತ್ತ ಇರುವಾಗ.....


ಮೌನವೇ ಬಾ ಕೂರು ಇಲ್ಲಿ
ಮಾತಿಗೇನಿದೆ ಅವಸರ....
ಅಯ್ಯೋ...ತಡೆಯೋ...ಕಣ್ಣ ಬಿಂದು
ಜಾರಬೇಡ ಸರಸರ.....
ಮೌನವೇ ನೀ ಕೇಳು ಇನ್ನು
ನೀನೆ ನನ್ನ ಆಸರೆ....
ನನ್ನ ಆಕೆ ಬಿಟ್ಟು ಹೊರಟು
ಕಾಡುತಿಹಳು ಅಪ್ಸರೆ....

ಬಾಡಿಹೋದ ಸುಮವ ಹಿಡಿದು
ಘಮವ ಹೀರುವ ಕಾತರ......
ಪುಟದಿ ಹೂತ ಘಮವು ಇಂದು
ತೋರಿತು ನೆನಪಿನ ಸಾಗರ......

ನಿನ್ನ ಪುಣ್ಯ ನಿನ್ನನಿಂದು
ಕರೆದು ಹೋಗಿದೆ ಅಲ್ಲಿಗೆ....
ಪಾಪಿ ನಾನು ಇನ್ನು ಮುಂದೆ
ಇರಲೆಬೇಕಾ ಇಲ್ಲಿಯೇ....?

ಸ್ವರ್ಗದಲ್ಲಿ ಕುಂದು ಕೊರತೆ
ಇರುವುದೆಂದು, ನೀ ಹೇಳಲು.....
ನಾನು ಅಲ್ಲಿಗೆ ಬರುವೆ ಅವರ
ಏಕೆ ಎಂದು ಕೇಳಲು.....

ನನ್ನ ನಿನ್ನ ಜೋಡಿ ಮಾಡಿದ
ದೇವರೆಲ್ಲಿಗೆ ಹೋದನು....
ನನ್ನು ಅವನು ಕೂಗಿ ಕರೆದರೆ
ಇಲ್ಲ ಎಂದು ಹೇಳೆನು.....

Wednesday, July 14, 2010

ಜನ ಸರೀ ಇಲ್ಲ ತಂದೆ.....

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ....

ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು ವೇಣುಗೋಪಾಲ ಸ್ವಾಮಿ ಅಂತ ಕರೀತಾರೆ....ಇದನ್ನು ಕೇಳಿ ಬಹಳ ನೋವಾಯಿತು.

ಕೇಳಿದ್ದನ್ನೆಲ್ಲ ಕೊಟ್ಟರೆ...ಜನ ದೇವರನ್ನು ಕೂಡ ಹುಚ್ಚು ಮಾಡ್ತಾರೆ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.....

ಅಲ್ಲಿ ಇದ್ದ ದೊಡ್ಡ Queue ನಲ್ಲಿ ಕಾದೂ ಕಾದೂ ಸುಸ್ತಾದಾಗ ...ಈ ಕವಿತೆ ಹುಟ್ಟಿತು....





ಆಗಲ್ಲಿ ಹೋಗಿ, ಈಗಿಲ್ಲಿ ಬಂದು

ಈ ಗಲ್ಲಿ ಗುಡಿಯ ಮುಂದೆ....

ಗಲ್ಲಿ ಗುಡಿಯ ಹಂಗ್ಯಾಕ ನನಗ

ನಾ ನಿನ್ನ ಒಳಗಾ ಮಿಂದೆ.....


ನಾ ಕೇಳಿದೆಲ್ಲ ನೀ ಕೊಡಲೆಬೇಡ...

ಜನ ಸರೀ ಇಲ್ಲ ತಂದೆ.....

ನಿನ್ನನಾ ಅವರು ಹುಚ್ಚು ಎಂಬುವವರು

ನಾ ಹೇಳುತೀನಿ ಇಂದೇ.....


ನೀ ಕುಂತೆ ಒಳಗೆ

ನಾ ನಿಂತೆ ಹೊರಗೆ

ಯಾಕಾ...ಹಿಂಗ ತಂದೆ...

ನಿನ್ನನ ನೋಡಲು ನಾನು ಯಾಕ

ಬರಬೇಕು ಒಳಗೆ ಎಂದೆ....


ಭಕ್ತ ಜನರು

ಯಾಕ್ಹಿಂಗ ಇವರು

ನಿನ್ನ ಬಂಧಿ ಮಾಡಿ....

ಗುಹೆಯಲ್ಲಿ ನಿನ್ನ

ಇಟ್ಟಿಹರು ಇವರು

ತಿಳಿಯರು ನಿನ್ನ ಮೋಡಿ.....


ನಿನ್ನ ನೋಡಲು

ಯಾರು ತಡೆವರು

ನನ್ನ ಇನ್ನು ಮುಂದೆ......

ಇಲ್ಲೇ ನಾನು ನಿಂತೆ ಈಗ

ಕಣ್ಣ್ಮುಚ್ಚಿ, ಬಾ... ಎಂದೆ....

ಅದು ಮನವು ನುಡಿವ ಭಾಷೆ.....

ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು ಅವನಲ್ಲಿ ಮೊರೆಯಿಟ್ಟರೆ ಮಾತ್ರ...ಅದು ಅವನನ್ನು ಮುಟ್ಟುತ್ತದೆ.....


ಅವೂ ಶಬ್ಧಗಳು.... ಏನೂ ಹೇಳವು

ಪೂರ್ತಿ ಭರ್ತಿ ಭಾಷೆ(ಭಾವನೆ + ಆಶೆ= ಭಾಷೆ)

ಮಾತಾಡು ಮನವೇ ನೀ ತಿಳಿಸಬೇಕು

ಆವಗ ನನ್ನ ಆಶೆ......



ಆ ಮಡಿಲ ಮಲಗಿ

ಈ ಹೆಗಲ ಎರಗಿ

ಕಂಡಂತ ಕನಸ ಭಾಷೆ.....

ಮೂಕ ಶಬ್ಧಗಳು ನುಡಿಯಲಾರವು

ಮನದ ಮಹಾ ಆಶೆ.....



ಆ ತಾಯಿ ನಗುವ

ಈ ಮಗುವು ಅಳುವ

ನಡುವೆ ಹರಿವ ಭಾಷೆ.....

ಶಬ್ಧಗಳು ಅಲ್ಲಿಗೆ ಹೋಗಲಾರವು

ಅದು ಮನವು ನುಡಿವ ಭಾಷೆ.....



ಹಾಡು ನನ್ನದು, ಕೇಳದು ನಿನಗೆ

ಶ್ಲೋಕ ಯಾವುದೂ ತಾಗದು ನಿನಗೆ

ಯಾವುದು ನಿನ್ನ ಭಾಷೆ....

ನೀ ಕರೀ ಮನವೇ, ಅವ ನನ್ನ ಕಡೆ

ಅದೇ ಆಶೆ ಇದು, ನನ್ನ ಕಡೇ.....



ನಾನ್ಯಾರು ತಂದೆ

ನಾನ್ಯಾಕೆ ಬಂದೆ

ನೀ ಹೇಳಬೇಕು ಇಂದೇ.....

ನಿನ್ನಲ್ಲಿ ನಾನು

ನನ್ನಲಿ ನೀನು

ಬೆರೆಯುವುದು ಎಂದು ಎಂದೆ.......

Tuesday, July 13, 2010

ರಾತ್ರಿ ಇದು ಕಳೀಬೇಕು.........

ಮುನ್ನುಡಿ: ಇಂದಿನ ಸಮಾಜದಲ್ಲಿ ಅಧರ್ಮದ ವಿಸ್ತಾರವನ್ನು ಕಂಡಾಗ....ಈ ಸಮಾಜದ ಶುದ್ಧೀಕರಣಕ್ಕೆ....ಇನ್ನೊಂದು ಧರ್ಮ ಯುದ್ಧದ ಅಗತ್ಯವಿದೆ ಅಂತ ಅನಿಸುತ್ತದೆ....ಅಂತ ಒಂದು ಧರ್ಮ ಯುದ್ಧಕ್ಕೆ ನಾಂದಿ ಹಾಡಿ ಮುನ್ನೆಡೆಸಲು ಒಬ್ಬ ಕೃಷ್ಣ....ಹಾಗು ಪ್ರಳಯ ರೂಪದಲಿ ಅಂತ್ಯ ಮಾಡಲು ಒಬ್ಬ ರುದ್ರ ಬೇಕಾಗಿದ್ದಾರೆ........

ರಾತ್ರಿ ಇದು ಕಳೀಬೇಕು
ಬಳಗ ಎದ್ದು ನಡೀಬೇಕು
ಸೂರ ನೀವು ತೊರೀಬೇಕು
ಧರ್ಮ ಯುದ್ಧವಾಗಬೇಕು
ಇನ್ನು ಜಗದಲಿ......

ಸಾರಥಿ ಅವ ನಮಗೆ ಬೇಕು
ಚಾಟಿಯನವ ಬೀಸಬೇಕು
ವೇದ ಸುತ್ರವ ಬಿಗಿಯಬೇಕು
ಗೀತೆ ಮತ್ತೆ ಹಾಡಬೇಕು
ಪಾಂಚಜನ್ಯ ಮೊಳಗಬೇಕು
ಮತ್ತೆ ಜಗದಲಿ......

ತಂದೆ-ತಾಯಿ ನಿಮಗೆ ನಮಿಸಿ
ಧರ್ಮ ಮಾತೆ ಕರೆಯನರಸಿ
ಹೊರಡಬೇಕು ಎಂದು ಅನಿಸಿ
ಹೇ ಮಕ್ಕಳೇ...ನಮ್ಮ ಕ್ಷಮಿಸಿ
ನಿತ್ಯ ಸತ್ಯ ಕುಣಿಯಬೇಕು
ಮತ್ತೆ ಜಗದಲಿ......

ಎಲ್ಲ ಇಹರು ಆಚೆ ಕಡೆಗೆ
ಬಹಳ ಇಲ್ಲ ಈಚೆ ಕಡೆಗೆ
ರಕ್ತ ನೆಲವು ಎಲ್ಲ ಕಡೆಗೆ
ಕಲ್ಲು ಕೋಳಿ ಕೂಗುವರೆಗೆ
ಮತ್ತೆ ಸೂರ್ಯ ಬರುವವರೆಗೆ
ಯುದ್ಧ ಜಗದಲಿ......

ಶಿವನೆ ನೀನು ಕುಣಿಯಬೇಕು
ಪರ್ವತವದು ಸಿಡಿಯಬೇಕು
ಸಾಗರಗಳು ಉಕ್ಕಬೇಕು
ರಕ್ತ ನೆಲವ ತೊಳೆಯಬೇಕು
ದುಷ್ಯಾಸನಿಗಳು ಅಳೆಯಬೇಕು
ಧರ್ಮ ಮತ್ತೆ ನೆಲೆಸಬೇಕು
ಇನ್ನು ಜಗದಲಿ......

ವೀರಾವೇಷವು ನಮಗೆ ಬೇಕು
ಸಮುದ್ರ ಮಂಥನವಾಗಲೇ ಬೇಕು
ನಂಜನು ನಾವು ಕುಡಿಯಲೇಬೇಕು
ಅಮೃತ ನಾಳೆಗೆ ಉಣಿಸಲೇಬೇಕು
ಧರ್ಮ ಯುದ್ಧಕೆ ಹೊರಡಲೇಬೇಕು
ನಾವು ಈ ರಾತ್ರಿಯಲಿ..........

ನಾನು ನೀನು ಇನ್ನು ಯಾರು
ಧರ್ಮಯುಧ್ಹಕೆ ಹಾರು ಹಾರು
ವೀರ ಮರಣವು ಹೊಂದಬೇಕು
ನಾವು ಇದರಲಿ.........
ವೀರ ಮರಣವು ಹೊಂದಬೇಕು
ನಾವು ಇದರಲಿ.........

Tuesday, July 6, 2010

ಜನ್ಮವಲ್ಲ ನಿಂದು....ಅವತರಣ......

ಮುನ್ನುಡಿ: ತಾಯಿಯ ಎಲ್ಲ ಕರ್ಮಗಳಲ್ಲಿರುವ ನಿಸ್ವಾರ್ಥತೆಯ ಭಾವ....ನಿನ್ನ ನಗುವಿಗೆ..ಆಕೆ ತನ್ನ ಅಳುವನ್ನು....ಹಾಗು ನಿನ್ನ ಅಳುವಿಗೆ..ಆಕೆ ತನ್ನ ನಗುವನ್ನು.....ಬಲಿ ಕೊಡುತ್ತಾಳೆ ....

ಆಕೆ ಎಂದೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ...ಅದಕ್ಕೆ ಆಕೆ ಮೂಗಿ....ಮಕ್ಕಳು ಆಕೆಯ ನೋವನ್ನು ಕೇಳುವುದಿಲ್ಲ...ಅದಕ್ಕೆ ಅವರು ಕಿವುಡರು.....

ಅಂತಹ ಒಂದು ನಿಸ್ವಾರ್ಥ ಜೀವನ ಬರೇ ಒಂದು ಜನ್ಮವಾಗಿರಲು ಸಾಧ್ಯವಿಲ್ಲ.....ಅದು ಒಂದು ಅವತರಣವೇ ಸರಿ......



ನಿನ್ನ ಭಾರವ ಆಕೆ ಹೊತ್ತಿಹಳು

ಭಾರವಲ್ಲವದು ಎಂದು ತಿಳಿದಿಹಳು

ನಿನ್ನ ಜನನಕೆ ಆಕೆ ಕಾದಿಹಳು

ಕನಸುಗಳೆಷ್ಟೂ ಆಕೆ ಕಂಡಿಹಳು

ಪ್ರಸವ ನೋವಿನಲಿ ಆಕೆ ಕೂಗಿಹಳು

ಜೀವವೊಂದಕೆ ನಾಂದಿ ಹಾಡಿಹಳು...

ಮಗುವ ಅಳುವಿಗೆ....ನಗುವುತಲಿಹಳು....

ಕೇಳದು ಆ ನಗುವು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನಗುವು.....

ನಿನ್ನ ಅಳುವ ಒಳಗೆ...



ಹಳೆಯ ಹಸಿರು ಸೀರೆಯ...ಆಕೆ ಉಟ್ಟಿಹಳು

ಹರೆದ ಸೆರಗನು ಆಕೆ ಮುಚ್ಚಿಹಳು

ಗಾಜಿನ ಬಳೆಯ ಆಕೆ ತೊಟ್ಟಿಹಳು...

ಕಾಸನು ಸೇರಗಂಚಿನಲಿ ಕಟ್ಟಿಹಳು

ಮಗಳಿಗೆ ಚಿನ್ನವ ಕೊಳ್ಳಲು ಹೊರಟಿಹಳು

ಮಗಳ ನಗುವಿಗೆ.....ನಗುವುತಲಿಹಳು....

ಕೇಳದು ಆ ನಗು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನಗುವು.....

ನಿನ್ನ ನಗುವ ಒಳಗೆ...



ಮನೆಯನು ತೊರೆದು ಮಗಳು ಹೊರಟಿಹಳು

ಮನದೊಳು ತಾಯಿ ಅವಳ ಹರೆಸಿಹಳು

ಕಣ್ಣೀರನ್ನು ಆಕೆ ಸುರಿಸಿಹಳು

ಮನದ ಹಿಂಡುವಿಕೆಯ...ಆಕೆ ಬಣ್ಣಿಸಳು .....

ತನ್ನ ನೋವನು ಹೇಳಳು ಅವಳು...

ಕೇಳದು ಆ ನೋವು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನೋವು.....

ನಿನ್ನ ನೋವ ಒಳಗೆ...



ಮಧ್ಯರಾತ್ರಿಯದು ಅವನೂ ಮಲಗಿಹನು

ಪಾಶ ಹಿಡಿಯುತಲಿ ಯಮನು ಬರುತಿಹನು

ಆಕೆಯೆಡೆಗೆ ಅವ ನೆಡೆದು ಬರುತಿಹನು

ಕ್ಯಯ ಮುಗಿದು ಅವ ಇಂತಿ ಎಂದಿಹನು

ಸಮಯ ಮುಗಿಯಿತು....ತಾಯೆ ಎಂದಿಹನು

ಸ್ವರ್ಗ ಕಾದಿಹುದು ಎಂದು ತಿಳಿಸಿಹನು

ಕೊನೆಯ ಆಸೆಯ ಅವನು ಕೇಳಿಹನು ......

ಮಗುವು ಮಲಗಿಹುದು..... ಎಂದು ಹೇಳಿದಳು

ಎಬ್ಬಿಸದಿರು ಅವನ...... ಎಂದು ಬೇಡಿದಳು...

ಕೇಳಲಿಲ್ಲ ಆ ಮೊರೆಯು ಮಗಗೆ......

ಅವನ ಸುಖ ನಿದ್ರೆಯೇ ಲೇಸು ಅವಗೆ.....



ಮೂಕ ತಾಯೆ.....ನೀನು ಯಾಕೆ........?

ಕಿವುಡ ಮಕ್ಕಳ ಹೆತ್ತೆಯಾಕೆ.........?

ಜನ್ಮವಲ್ಲ ನಿಂದು....ಅವತರಣ......

ಮರಣವಲ್ಲವದು......ಮಹಾಮರಣ......

ಹರಸುತಿರು ಎಂದೂ....ನೀನು ಎನ್ನ....

ಬರುವೆನು ಮತ್ತೆ ನಾನು ಆ ಮಡಿಲಿಗೆ ನಿನ್ನ.....

Monday, July 5, 2010

ಯಾರ ಹಂಗಿಂದು ಎನಗೆ....

ಮುನ್ನುಡಿ: ದೇವರೊಂದಿಗೆ ಒಂದು connection ಕಲ್ಪಿಸಿಕೊಂಡಿರುವ ಆತ್ಮವು.....ದೇಹಕ್ಕೆ ನೋವು, ನರಳುವಿಕೆ ಆದಾಗ...ಹೇಗೆ ಪ್ರತಿಕ್ರಿಯಿಸುತ್ತದೆ.....
ಅದು...ಈ ನೋವು ಒಂದು Temporary Phase ಅಂತ ತಿಳಿದಿರುತ್ತದೆ.....ದೇಹದ ಹಸಿವು(Materialistic ಹಸಿವು) ಹಾಗು ಆತ್ಮದ ಹಸಿವು(Spiritual ಹಸಿವು) ಹೇಗೆ ಭಿನ್ನ ಎಂಬುದನ್ನು ತೋರಲು........



ಒಂಟಿಯಾಗಿ ಹೊರಟಿಹೆ ಈ ಮರುಭೂಮಿಯೊಳು ನಾನು
ಸುಡುತಿಹುದು ದೇಹವೆಲ್ಲಾ....... ಬಾಯಾರುತಿಹುದು
ನಗುತಿಹುದು ಮನವು....ಕಾಯುವವ ನೀನಿರುವೆ ಎಂದು ಅರಿತು
ತಂಪಾದ ಗಂಗೆಯೊಂದು ಕಾದಿದೆ ಎನಗೆ ಈ ಮರಳಿನಾಚೆ ಎಂದು ಅರಿತು

ಹಸಿದು ಮಲಗಿರುವೆ ಎನ್ನ ಗುಡಿಸಿಲೊಳು ನಾನು
ಆಶಕ್ತವಾಗಿಹುದು ದೇಹವೆಲ್ಲಾ ...........ನರಳುತಿಹುದು
ಕುಣಿಯುತಿಹುದು ಮನವು....ಬರುವೆ ನೀನು ಎಂದಾದರೂ ಎಂದು ಅರಿತು
ಸಿಹಿಹಣ್ಣನೋತ್ತ ಕಲ್ಪವೃಕ್ಷವೊಂದು ಕಾದಿಹುದು ಮನಕೆ....ದೇಹದ ಈ ಹಸಿವಿನಾಚೆ ಎಂದು ಅರಿತು

ಸ್ವೀಕರಿಸು ದೇಹದ ಈ ಪೂರ್ಣಾಹುತಿಯನಿಂದು
ನಾ ನಡೆಸಿದ ಯಾಗವು ಸಂಪೂರ್ಣವಿಂದು
ಹೊರಟಿದೆ ದೀಪವು ಮಣ್ಣಿನ ಹಣತೆಯನಗಲಿ ಇಂದು
ಯಾರ ಹಂಗಿಂದು ಎನಗೆ....ನೀನೆ ಎನ್ನ ಗುರಿ ಎಂದು

Saturday, July 3, 2010

ನೀನೇ ಹೇಳಮ್ಮ.......

ಮುನ್ನುಡಿ: ಬ್ರಹ್ಮಾಂಡದ(ಬ್ರಹ್ಮ+ಅಂಡ) ರಚನೆಯು ಒಂದು ಘೋರವಾದ ಶಬ್ದದಿಂದ(Big Bang) ಆಯಿತು ಅಂತ ಹೇಳುತ್ತಾರೆ.....
ಆದರೆ ಕವಿಯ ಪ್ರಕಾರ....ಒಂದು ಜೀವದ ಬರುವಿಕೆಗೆ Big Bang ಬೇಕಾಗಿಲ್ಲ.....ಒಂದು ಮಗುವ ಅಳುವೇ ಆ ಜೀವನದ ಆದಿಯ ಸಂಕೇತ




ಗೂಡೊಂದನ್ನು ಕಟ್ಟಿಹ ಬ್ರಹ್ಮ
ಮೊಟ್ಟೆಯು ಅದರೊಳಗೆ ಇಟ್ಟಿಹನಮ್ಮ
ಕಾವನು ಅವನು ಕೊಟ್ಟಿಹನಮ್ಮ
ಕನಸೊಂದನ್ನು ಕಂಡಿಹನಮ್ಮ

ಮೂಡನು ಮನುಜನು ಅರಿಯನವನಮ್ಮ
ಸೃಷ್ಟಿಯ ಹುಟ್ಟ ತಿಳಿಯನವನಮ್ಮ
ಘೋರ ಶಬ್ಧದಿ ಎಂಬುವನಮ್ಮ
ಮೂಡನು ಅವನು ಬೀಗುವ ಸುಮ್ಮ

ಮಗುವ ಮೊದಲ ಅಳುವು....
ಘೋರವೇನಮ್ಮ.....?
ಸೃಷ್ಟಿಯ ರೂಪ ಹೇ ತಾಯೆ...
ನೀನೇ ಹೇಳಮ್ಮ.......

Thursday, July 1, 2010

ರಸಿಕ conductor

ಅಂದು ಶುಕ್ರವಾರ...ರಾತ್ರಿ ಸುಮಾರು ಹತ್ತು ಘಂಟೆ ಆಗಿತ್ತು....ನಾನು ಅಂದು ನಮ್ಮ ಊರಿಗೆ ಹೊರಟಿದ್ದೆ...ಮಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ನನ್ನ ಬಸ್ಸಿಗೆ ಕಾಯುತ್ತ ಕುಳಿತಿದ್ದೆ......ಮುಂಗಾರು ಅಂದು ತಾನು ಬರುತ್ತಿರುವೆ....... ಎಂದು...ಮೆಘಸಂದೆಶ ಒಂದನ್ನು ಕಳುಹಿಸಿತ್ತು......ಮೋಡಗಳು...ಮಧ್ಯಾಹ್ನದಿಂದಲೇ ಊರಲ್ಲೆಲ್ಲ ಆವರಿಸಿದ್ದವು......ಆಗ ತಾನೇ...ಸಣ್ಣಗೆ ಮಳೆಯೂ ಶುರುವಾಗಿತ್ತು..ಸ್ವಲ್ಪ ಹೊತ್ತಿನಲ್ಲೇ ನನ್ನ 'ರಾಜಹಂಸವು' ಕೊಡ ಬಂತು..ನಾನು ನುಸಿ ಮಳೆಯಲ್ಲಿ ಓಡುತ್ತಾ ಹೋಗಿ ನನ್ನ ಹಂಸವನ್ನು ಏರಿ ಕುಳಿತೆ.....



ಬಸ್ಸಿನಲ್ಲಿ ಒಂದೂ ಚಂದವಾದ ಹುಡುಗಿ ಇಲ್ಲ....ಆದರೂ ಸೀಟಿ ಹೊಡೆದುಕೊಂಡು ಓಡಾಡುತ್ತಿದ್ದ ನಮ್ಮ ರಸಿಕ conductor ಅನ್ನು ನೋಡಿ ಮನದಲ್ಲೇ ತುಸು ನಕ್ಕು...ಕಿವಿಗೆ earphoneಗಳನ್ನೂ ಚುಚ್ಚಿಕೊಂಡು ಹಾಡು ಕೇಳಲಾರಂಭಿಸಿದೆ....ಅದರಲ್ಲಿ ನಾದಮಯ ಎಂಬ ಮಧುರವಾದ ಹಾಡು ಬರುತ್ತಿತ್ತು....



ಹಾಗೆ ಕಿಟಕಿಯ ಪರದೆ ಸರಿಸಿ ಹೊರ ನೋಡಿದೆ....ಮಳೆಯೂ ಜೋರಾಗಿ ಬರಲಾರಂಭಿಸಿತ್ತು .....ಅದನ್ನು ನೋಡುತ್ತಾ....ನನ್ನ ಕವಿಮನಕ್ಕೆ...ಒಹ್...ಮುಂಗಾರು ಈ 'ನಾದಮಯ'ವಾದ ಹಾಡಿಗೆ ಕುಣಿಯುತ್ತಿದಾಳಾ...?ಅಂತ ಅನಿಸಿತು... ಇಂಥ ಹಲವು ಹುಚ್ಚ್ಚು ಯೋಚನೆಗಳು ಬರಲಾರಂಭಿಸಿದವು.....ಹಾಗೆ........seatನ ಮೇಲೆ ಒರಗಿಕೊಂಡು ಕಣ್ಣು ಮುಚ್ಚಿದೆ.....ಬಸ್ ಕೂಡ ಹೊರಟಿತು.....



ಅಷ್ಟರಲ್ಲೇ....ಹಿಂದಿನಿಂದ ಯಾರೋ ಒಬ್ಬರು..ರೀ...conductor ಸಾಹೇಬರೇ.......ಅಂತ ಕೂಗಿದರು....ಯಾರು ಅದು ಅಂತ ಹಿಂದೆ ತಿರುಗಿ ನೋಡಿದೆ...ಒಬ್ಬ...ಹಿರಿಯರು...ನಿಂತಿದ್ದರು....ಏನ್ರೀ ಇದು...ನೀರು ಎಲ್ಲ ಒಳಗೆ ಸೋರುತ್ತಿದೆ.. ಅಂತ ಕೂಗಿದರು....ನಮ್ಮ conductor ಬಂದು....ತನ್ನ ಕನ್ನಡಕವನ್ನು ಹಾಕಿಕೊಂಡು...Sherlock Holmes levelನಲ್ಲಿ investigate ಮಾಡಿದರು.... ಸರ್....ಬನ್ನಿ ...ನನ್ನ ಸೀಟ್ ಬಿಟ್ಟು ಕೊಡ್ತೇನೆ...ಅಂತ ಅಂದು.....'ಸೋರುತಿಹುದು...ಮನೆಯ ಮಾಳಿಗಿ...ಅಜ್ಞಾನದಿಂದ....' ಅಂತ ಹಾಡುತ್ತ ಡ್ರೈವರ್ ಕಡೆಗೆ ಹೊರಟರು...



ಒಂದೇ ಕಲಾತ್ಮಕ ವಾಕ್ಯದಲ್ಲಿ ಸಾರಿಗೆ ಸಂಸ್ಥೆಯ ಪಾಡನ್ನು ಬಣ್ಣಿಸಿದ ಆ conductorಗೆ ಮನಸಲ್ಲೇ ಮೆಚ್ಚುಗೆ ವ್ಯಕ್ತಪಡಿಸುತ್ತಾ....ನಾನು ಮತ್ತೊಮ್ಮೆ...ಕುಣಿಯುತ್ತಿದ್ದ ಮುಂಗಾರನ್ನು ನೋಡಿ...ಹಾಗೆ .......ಕಣ್ಣು ಮುಚ್ಚಿ ನನ್ನ ಹಾಡು ಹಾಗು ನನ್ನ ಹುಚ್ಚ್ಚು ಭಾವನೆಗಳಿಗೆ ಮರಳಿದೆ.....