Wednesday, September 29, 2010

ಮಾತಾಡು ಮಗುವೆ ಏನಾಗಿದೆ ನಿನಗೆ

ಮುನ್ನುಡಿ: ಅದೇಕೋ...ಇತ್ತೀಚಿಗೆ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಕೂಡ ಇಂಗ್ಲಿಷ್ ನಲ್ಲಿ ಮಾತಾಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಹೀಗೇ ಮುಂದುವರಿದರೆ,ಪ್ರಾಯಶಃ ನಾವೇ ಕನ್ನಡದ ಅಳಿವಿಗೆ ಕಾರಣವಾಗುತ್ತೀವಿ. ಇದು ನಾವು ತಾಯಿಗೆ ಮಾಡುವ ಒಂದು ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ.

ಈ ಪಾಪಕ್ಕೆ ನಮ್ಮ ಮಕ್ಕಳು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ. ಮುಂದಿನ ಪೀಳಿಗೆಗೆ ಕನ್ನಡತನವನ್ನು ಪಸರಿಸಿ ಹೋಗುವ ಕಾರ್ಯ ನಾವೇ ಮಾಡಬೇಕಿದೆ......

ಈ ಕನ್ನಡ ರಾಜ್ಯೋತ್ಸವಕ್ಕೆ, ಏನಾದರು ಬರೆಯಬೇಕು ಅಂತ ಅಂದುಕೊಂಡಾಗ, ಈ ವಿಷವವೇ ಸೂಕ್ತ ಅಂತ ಅನಿಸಿತು.....





ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಋಣವು ಕಾಡಿಲ್ಲವೆ ನಿನಗೆ......



ತುತ್ತು ತುತ್ತಲಿ ಕನ್ನಡ ಬೆರೆಸಿ

ಉಣಿಸುವ ತಾಯರು ಎಲ್ಲಿಹರಿಂದು....

ಮಾತು ಮಾತಲಿ ಕನ್ನಡತನ ಕಲಿಸುವ

ತಂದೆಯರು ಎಲ್ಲಿಹರು ಇಂದು.....



ಮನೆ ಮನೆಯಲ್ಲಿ ಒಂದು ಕನ್ನಡ ಶಾಲೆಯ

ಕಟ್ಟುವ ಗುರುಗಳು ಎಲ್ಲಿಹರಿಂದು....

ಮನ ಮನದಲಿ ಹೊಕ್ಕಿ ಕನ್ನಡತನ

ಕೆಣಕುವ ಗುರುಗಳು ಎಲ್ಲಿಗೆ ಹೊಗಿಹರಿಂದು.....



ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಕೋಟಿ ಆಣೆಯು ನಿನಗೆ.....



ಕಣ್ಣಲಿ ಕನ್ನಡ ಕಿಚ್ಚೇ ಇಲ್ಲದ

ಮಕ್ಕಳು ಯಾಕೆ ಬಂದಿಹರಿಲ್ಲಿ

ಕನ್ನಡವೇ ಹರಿಯದ ದೇಹಗಳಲಿ

ಪ್ರಾಣವು ಇರುವುದು ಇನ್ನೆಲ್ಲಿ....



ಮತ್ತೆ ಹುಟ್ಟಲೀ ವೀರ ಮಕ್ಕಳು

ಎದ್ದು ನಿಲ್ಲಲೀ ನಮ್ಮ ಒಕ್ಕಲು...

ಕಾಳಿಂಗನ ತವರಿದು ಮರೆಯಲೇ ಬೇಡ

ಹುಳುಗಳ ಹಾಗೇ ನಡೆಯಲೇ ಬೇಡ.....



ಮಾತಾಡು ಮಗುವೆ ಏನಾಗಿದೆ ನಿನಗೆ

ತಾಯಿಯ ಅಳಲು ಕೇಳದೆ ನಿನಗೆ......





ದಾಸರು ಹಾಡಿರೋ ರಚನೆಗಳಲ್ಲಿ

ಶರಣರು ಬರೆದಿರೋ ವಚನಗಳಲ್ಲಿ...

ಕನ್ನಡ ಕುಣಿಯುವ ದೇಹಗಳಲ್ಲಿ

ಕನ್ನಡತನ ಮಿಡಿಯುವ ಒಡಲುಗಳಲ್ಲಿ.....

ಬೆಳೆಯಲಿ ಮಕ್ಕಳು ಇವುಗಳ ಹೀರಿ

ಉಳಿಯಲಿ ತಾಯಿ ಎಲ್ಲರ ಮೀರಿ.....



ನೀನಾಡುವ ಮಾತೇ....ಮಾತೆಗೆ ವಸ್ತ್ರ

ನಿನ್ನಲಿ ಮಿಡಿಯುವ ಕನ್ನಡತನ ಅಸ್ತ್ರ....

ವಿಶ್ವ ಕಿಚ್ಚನೇ. ... ..ಕೊಚ್ಚುವ ರಭಸ

ಕನ್ನಡವಂದೇ ..ಬೆಳೆಯುವ ದಿವಸ....

ತಾಯಿಯು ಅಂದೇ...ಬೆಳೆಯುವ ದಿವಸ...

ತಾಯಿಯು ಅಂದೇ..ಮೆರೆಯುವ ದಿವಸ....



ದ್ವೈತ ಅದ್ವೈತವು ಸೇರಿದ ನಾಡು

ಕೊಂಕಣ ತುಳುವರ ಕೊಡವರ ನಾಡು

ನಮ್ಮದು ಇದು ಕರುನಾಡು....

ನಮ್ಮೆಲ್ಲರದು ಇದು ಕರುನಾಡು.....



ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಬೆಳೆಸುವ ಕಾರ್ಯವು....ನನಗೆ ನಿನಗೆ.....

ಮುಂಜಾವು....

ಮುನ್ನುಡಿ: ನಮ್ಮ ಬಾಳಿಗೆ ಮುಂಜಾವು ಯಾವಾಗ ಬರುವುದು ಎಂದು ಅನಿಸಿದಾಗ......

ನಮ್ಮಲ್ಲಿ ಇರುವ ಬಣ್ಣಗಳ ಭೇದ...ಜಾತಿ ಧರ್ಮಗಳ ಭೇದಗಳು ಅಳಿತಾಗ....

ಕಷ್ಟ ಸುಖವನ್ನು ಒಂದೆಂದು ಕಂಡಾಗ...

ರಾತ್ರಿಯನು...ಬೆಳಕಿನ ಮುನ್ನುಡಿ ಎಂದು ಕಂಡಾಗ....

ಪ್ರಾಯಶಃ ನಮಗೂ ಬೆಳಕು ಕಾಣುವುದು......




ಬರ್ತೈತಿ ಬರ್ತೈತಿ ನೋಡ ಮುಂಜಾವು

ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು.....


ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ

ನಮ್ಮ ಕನಸಿನ ಮುಂಜಾವು.....

ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ

ಬೆಳಕೇ ಅದು ಮುಂಜಾವು....


ಸುಡುತಿರೋ ಸೂರ್ಯನು

ತಣಿಸುವ ನೆರಳು

ಒಂದೆಂದರೆ

ಅದೇ ಮುಂಜಾವು.....


ಮುಳುಗುವ ಸೂರ್ಯನು

ನಾಳೆಯ ಬೆಳಕಿಗೆ

ನಾಂದಿ ಎಂದರೆ

ಮುಂಜಾವು.....


ಇರುಳಲಿ ಬೆಳಕಲಿ

ನದಿಯಲಿ ಕಡಲಲಿ

ನನ್ನಲಿ ನಿನ್ನಲಿ

ಇರುವವನ ಅರಿತರೆ..ಮುಂಜಾವು.....


ಬೆಳಕನು ಹುಡುಕುತ ಹೊರಡಲೇ ಎಂದು

ನಾನು ನೀನು ಹುಟ್ಟಿವೆ ಎಂದು

ಅರಿತ ದಿನವೇ ಮುಂಜಾವು.....


ಬರ್ತೈತಿ ಬರ್ತೈತಿ ನೋಡ ಮುಂಜಾವು....

ಇಂದಲ್ಲ ನಾಳೆ ಬರ್ತೈತಿ ಮುಂಜಾವು......

Monday, September 6, 2010

ಜನಪದ ಹಾಡು......

ಮುನ್ನುಡಿ: ಮೊನ್ನೆ TV ಯಲ್ಲಿ ಒಂದು ಹಾಡುಗಳ Reality Show ನೋಡ್ತಿದ್ದೆ.ಅಂದು ಅದರಲ್ಲಿ ಜಾನಪದ ಹಾಡುಗಳ Round.ಅದರಲ್ಲಿ ಹಾಡುವ Participants ಗಳು ತಮ್ಮ ತಮ್ಮ ಸರದಿಯ ಪ್ರಕಾರ ಹಾಡುವಾಗ, ಅವರಿಗೆ ಉಳಿದವರೆಲ್ಲ Chorus ಆಗಿ ಹಾಡುತ್ತ ಇದ್ದರು....ಅದನ್ನು ನೋಡಿದಾಗ...ಜಾನಪದ ಎಂದರೆ ಅದೇ ಅಲ್ಲವೇ,"ಎಲ್ಲರೂ ಸೇರಿ ಹಾಡುವ ಹಾಡು".....ಅಂತ ಈ ನನ್ನ ಪೆದ್ದು ತಲೆಗೆ ಹೊಳೆಯಿತು.....


ಎಲ್ಲ ವಿಷಯದಲ್ಲೂ ನಾವು ಎಲ್ಲರೂ ಇವತ್ತು Solo ಆಗಿ ನಮ್ಮ ಹಾಡು ನಾವು ಹಾಡುತ್ತ ಇದ್ದೇವೆ. ಆದರೆ ನಾವೆಲ್ಲರೂ ಒಂದಾಗಿ ಯಾವತ್ತು ಹಾದುತ್ತೆವೋ...ಅವತ್ತೇ ನಮ್ಮೆಲ್ಲರಿಗೆ ಜಯ ದೊರಕುವುದು....ಅವತ್ತೇ ನಮಗೆ ಈ Solo(ಸೋಲೋ....?)ಇಂದ ಮುಕ್ತಿ....


ಶಿಷ್ಟ ಸಾಹಿತ್ಯಕ್ಕೆ ಹಾಡುವ ಹಾಡು ಹಾಗು ಜಾನಪದ ಸಾಹಿತ್ಯಕ್ಕೆ ಹಾಡುವ ಹಾಡುಗಳಲ್ಲಿ ಒಂದು ಮೂಲಭೂತವಾದ Difference ಎಂದರೆ, ಅದು ಆ ಹಾಡುಗಳಲ್ಲಿ ಇರುವ Energy Level. ನನ್ನ ಪ್ರಕಾರ ಜಾನಪದ ಹಾಡನ್ನು ಹಾಡುವವರ ಮನದಲ್ಲಿ ಅಷ್ಟೇ ಅಲ್ಲದೆ ಅವರ ದೇಹದಲ್ಲಿ ಕೂಡ ದೇವರು ಹೊಕ್ಕಿ ಹಾಡಿಸಬೇಕಾಗುತ್ತದೆ. ಇದು ಅಂತ ಮೈ ನವಿರೇಳಿಸುವ ಸಂಗೀತ.


ಹಾಗೇ ಜಾನಪದ ಹಾಡುಗಳ ವಿವಿಧ ಆಯಾಮಗಳು, ಈ ಹಾಡುಗಳಲ್ಲಿ ಇರುವ ಜೀವನ ಮೌಲ್ಯದ ಕಥೆಗಳು ಹಾಗು ಒಂದು ಜಾಗೃತ ಸಮಾಜದ ಸೃಷ್ಟಿಗೆ ಜಾನಪದ ಹಾಡುಗಳ ಕೊಡುಗೆ ಬಗ್ಗೆ ಯೋಚಿಸುತ್ತ ಇರುವಾಗ, ಈ ಸಾಲುಗಳು ಹರಿದವು.....




ಹಾಡು ಹಾಡು ನೀ ಹಾಡೊಂದನ್ನು

ಎಲ್ಲರೂ ಕೂಡುವ ಹಾಡೊಂದನ್ನು.......

ನನ್ನ ನಿನ್ನ ಎಲ್ಲರ ಹಾಡನ್ನು

ಎಲ್ಲರೂ ಹಾಡುವ ಹಾಡೊಂದನ್ನು.....



ಪದ ಪದ ಪೋಣಿಸೆ ಪದವಾದೀತು

ಎಲ್ಲರೂ ಹಾಡಲು, ಜನಪದವಾದೀತು.....

ಹಾಡಬೇಕು ಆ ಹಾಡೊಂದನ್ನು

ಜನರನು ಬೆಸೆಯುವ ಹಾಡೊಂದನ್ನು.....



ತಾತನ ಕಥೆಗಳು ಕಲಿಸುವ ಹಾಡು

ಅಜ್ಜಿಯ ತುತ್ತಲಿ ಬೆರೆತಿರೋ ಹಾಡು

ಇವುಗಳ ಸೇರಿಸಿ ಹಾಡನು ಮಾಡು

ಜನಪದವೆಂದು, ಅದನು ನೀ ಹಾಡು......



ಕಲ್ಲನು ಉಳಿಯು ಮೀಟುವ ಹಾಡು

ಹನಿಗಳು ಧರೆಯನು ತೊಳೆಯುವ ಹಾಡು.....

ಕಾಡಲಿ ಗಾಳಿಯು ಓಡುವ ಹಾಡು

ಮನವನು ಕುಣಿಸುವ ಜನಪದ ಹಾಡು.....



ಮಾರಮ್ಮ ಮೈ ಹೊಕ್ಕಿ, ಬೀರಪ್ಪ ಕುಣಿದಿರಲು

ತಮಟೆಯ ತೊಗಲು ಹಾಡುವ ಹಾಡು......

ನಡೆ-ನಡೆದು ಬಿದ್ದಾಗ, ದುಡಿ-ದುಡಿದು ಸತ್ತಾಗ

ಹುರಿದುಂಬಿಸಿ ಎತ್ತುವಾ ಜನಪದ ಹಾಡು......



ಸುಗ್ಗಿಯ ಸವಿಯಲು ಹಾಡುವ ಹಾಡು

ಮೈ ಕೈ ಕುಲಕಿಸಿ ಹಾಡುವ ಹಾಡು....

ಆತ್ಮ ಜ್ಯೋತಿಯನು ಝಾಳಪಿಸಿ ಹಾಡು....

ನನ್ನ ನಿನ್ನಲಿ ಹುಟ್ಟಿದ ಹಾಡು

ಎಲ್ಲರ ಬೆಸೆಯುವ ಜನಪದ ಹಾಡು......