Monday, December 12, 2011

ಮಾರ್ತಾಂಡನ ಮೊಲೆಗೊಳಿಸಿ ಹಾಲ್ಗುಡಿಸು ಬಾ ತಾಯೆ

ಬ್ರಮ್ಹಾಂಡವನೇ ಕಲೆಸಿ ಬಾ ಉಣಿಸು ಬಾ ತಾಯೆ



ನನ್ನ ಖಂಡ ಖಂಡದಿ ನೀ ಅಖಂಡವಾಗಿ ಬಾ ತಾಯೆ

ಚಂಡದಿ ಚಂಡಿಯ ನಾ ಮುಡಿದೆ ಬಾ ತಾಯೆ



ನನ್ನ ಒಡಲಾಳದಿ ಕಡಲ ಮುತ್ತಾಗಿ ನೆಲೆಸು ಬಾ

ನಿನ್ನ ಮುಗಿಲ ಮಡಿಲೋಳು ಮಲಗೋ ಮನ ನಂದು ಬಾರೆ ಬಾ



ಅರಿವ ಅರಿವ ಕಣ್ಣಾಗಿ ಬಾರೆ ಬಾ

ಇರುಳ ಮರುಳನಳಿಸಾಕೆ ಬಾರೆ ಬಾ



ಬಸಿರಾಳದಲ್ಲೂ ಉಸಿರಾಳದಲ್ಲೂ ನಾ ನಿನ್ನೆ ನಂಬಿ ಕೊಂಡೆ

ಭ್ರಮ ಸರಿಸಿ ಬರುವ ಭ್ರಾಮರಿಯನಿಂದು ನಾನು ಕಂಡೆ ಕಂಡೆ

ಭವ ಕೆಸರಿನಿಂದ ಮೇಲೆದ್ದು ಬಂದು

ಓ ನನ್ನ ಅರಿವೇ ಅರಳು

ಮರುಳ ದೇಹದಲಿ ಅರಳಿ ನಿಂತು

ನೀ ಬೆಳಕಿನೆಡೆಗೆ ಮರಳು



ಮೂಲದಿಂದ ಆ ಯೋಗ ನಾಗವು

ಸರಿದು ಹರಿದು ಬರಲಿ

ಪಂಚಭೂತಗಳ ಹೆಡೆಯ ತೆರೆದು

ಅದು ಆರ ಮೀರಿ ನಿಲಲಿ



ಭವ ದಾಟಿ ಬಂದ ಅನುಭವವೇ ಅಂದ

ಅನುಭಾವವಾಗಿ ನಿಂದು

ಜಗವಾಳೋ ಭಗವತ್ ಶಕ್ತಿ ಅಂದು

ನಿಜ ಅರ್ಥದಲ್ಲಿ ಬಂದು



ನನ್ನ ದೇಹವಂದು ನಿಜ ಅರ್ಥದಲ್ಲಿ

ಪ್ರಾಣ ಪೂರ್ಣ ಯಂತ್ರ

ನಾ ಅರಿವೆ ಅಂದು ಗಜ ಗಾತ್ರದಲ್ಲಿ

ಪೂರ್ಣ ಪ್ರಾಣ ಮಂತ್ರ



ನನ್ನ ಮನವು ಇಂದು ಇದು ಯೋನಿ ನಿನಗೆ

ಬಾ ಬಾರೋ ದೇವ ಹುಟ್ಟಿ

ಆತ್ಮ ದೀಪ ಹೊಮಾಗ್ನಿಯಾಗಿ

ಬರುವನು ಸೂರ್ಯ ಹುಟ್ಟಿ



ನನಗಂದ ತಂದ ಅರವಿಂದನಿಂದ

ಈ ಬಾಳ ಗಂಧ ಚಂದ

ಬೆಳಕ ಸುರಿಸಿ ಮಜ್ಜನವಗೈದಳು

ಶ್ರೀಮಾತೆ ಕಣ್ಣಿನಿಂದ

ಏಕಾಂತದ ದ್ವೀಪ


ಕೆಲವು ದಿನಗಳ ಹಿಂದೆ, ನನ್ನ ಗೆಳೆಯ ರುದ್ರಪ್ಪನವರು ಏಕಾಂತದ ದ್ವೀಪದ ಬಗ್ಗೆ ಬರೆದಿದ್ದರು( ಕನ್ನಡ ಬ್ಲಾಗ್ನಲ್ಲಿ ಪ್ರಕಟಿಸಿದ್ದರು). ಅದನ್ನು ಓದಿ, ನಾನು, ನನ್ನ ಏಕಾಂತದ ದ್ವೀಪವನ್ನು ಹುಡುಕುತ್ತ ಹೊರಟಾಗ.......ಈ ಸಾಲುಗಳು ಮೂಡಿ ಬಂದವು.



ಈ ಕವಿತೆಯಲ್ಲಿ, ಒಂದೇ ಶಬ್ದ ಅಥವಾ ಸಾಲುಗಳಿಗೆ ಹಲವು ಅರ್ಥಗಳು ಬರುವ ಹಾಗೆ ರೂಪಿಸುವ ಒಂದು ಪ್ರಯತ್ನ ಮಾಡಿದ್ದೇನೆ. ಇಷ್ಟವಾದಲ್ಲಿ ತಿಳಿಸಿ. ಇಷ್ಟವಾಗದಲ್ಲಿ ಕಡ್ಡಾಯವಾಗಿ ತಿಳಿಸಿ.



ಅದು ನಂದು ದ್ವೀಪ, ಆನಂದ ದ್ವೀಪ

ನಂದದಾ ಒಂದು ದೀಪ

ಅದು ಇರುವುದಲ್ಲಿ, ಬೆಳಕಿರುವುದಲ್ಲಿ

ಅದುವೇ ನಂದಾ ದೀಪ



ನೀ ಹಾರು ಹಾರು, ನೀರ್ ಆಳವಿಲ್ಲ

ನಿನ್ನ ಭಕ್ತಿ ಗಾತ್ರಕಿಂತ

ಮುಳುಗಿಸುವುದಲ್ಲ, ಬೆಳಗಿಸುವ ಕಡಲಿದು

ಅವನಿರುವ ಸೂತ್ರವಂತ



ಅದು ಇರುವುದಲ್ಲಿ, ಮನ ಕಾಣುವಲ್ಲಿ

ಅದು ಇಲ್ಲ ಇಲ್ಲ ದೂರ

ಉಕ್ಕುವ ಉಲ್ಕಾ ಕಡಲಿದು ಬಂದು

ಕರೆಯುತಿಹುದು ಬಾರಾ



ಇದರಾಳವೇಷ್ಟು ಇದರುಪ್ಪು ಎಷ್ಟು

ತಿಳಿಯದೆ ನಿಂದೆ ಬಂದು

ಮಧು ಮಧುರವೆಂದು

ದೈವಾಧರದಿಂದ ವಾಣಿ ಒಂದು ಬಂದು



ಅದೋ ಕಂಡ ಕಂದ, ಆನಂದ ಕಂದ

ಶ್ರೀಮಾತಾರವಿದರಂದ

ಅದರಂದ ತಂದ ಬೆಳಕಿಂದ ಬಂದ

ನವಜಾತ ಬಂದು ನಿಂದಾ



ಶಬ್ಧಗಳ ವಿವಿದಾರ್ಥಗಳು:

ನಂದದಾ ಒಂದು ದೀಪ (೩ ಅರ್ಥ):

೧. ನಂದೂ ಅದ ಒಂದು ದೀಪ; ನಂದೂ ಒಂದು ದೀಪ ಇದೆ

೨. ನಂದು ಅದಾ ಒಂದು ದೀಪ; ನಂದು ಇದೇ ಒಂದು ದೀಪ

೩. ನಂದಿ ಹೋಗದಾ , ಆರಿ ಹೋಗದಾ ದೀಪ

ಇದನ್ನು ಓದಿದ ರುದ್ರಪ್ಪನವರು, ಹೀಗೆ ಹೇಳಿದರು:

ಇದು ೩ ಅರ್ಥ ಅಲ್ಲ. ಇದು ಜಾಗೃತಿಯ ೩ ಘಟ್ಟಗಳು.

ಘಟ್ಟ ೧. ಹುಟ್ಟಿದಮೇಲೆ, ನನಗೂ ಒಂದು ದೀಪ ಇದೆ ಅನ್ನುವ ಅರಿವು

ಘಟ್ಟ ೨. ನಂದು ಅದೇ ಒಂದು ದೀಪ ಅಂತ ಗುರುತು ಹಿಡಿವ ಅರಿವು

ಘಟ್ಟ ೩. ನನ್ನದು ನಂದದಾ ದೀಪ ಅನ್ನುವ ಅರಿವು.

ಇಷ್ಟು ಸೂಕ್ತ ವಾಗಿ ವಿಶ್ಲೇಷಣೆ ಮಾಡಿದ ರುದ್ರಪ್ಪನವರಿಗೆ ನನ್ನ ಧನ್ಯವಾದಗಳು.



ಅವನಿರುವ ಸೂತ್ರವಂತ (೨ ಅರ್ಥ):

೧. ನಮ್ಮೆಲ್ಲಾರ ಸೂತ್ರ ಹಿಡಿದು ಕೊಂಡಿರುವವನು

೨. ನಾನು ಮುಳುಗಿದರೆ ಎತ್ತಲು ಸೂತ್ರ ಹಿಡಿದು ಕಾಯುತ್ತಿರುವವನು



ಮನ ಕಾಣುವಲ್ಲಿ(೨ ಅರ್ಥ):

೧. ಮನಸ್ಸಿಗೆ ಕಾಣಿಸುವಲ್ಲಿ

೨. ಮನಸ್ಸು (ನನ್ನ ನಿಜವಾದ ರೂಪ) ಕಾಣುವಲ್ಲಿ



ತಿಳಿಯದೆ ನಿಂದೆ ಬಂದು(೩ ಅರ್ಥ):

೧. ತಿಳಿಯದೇ ನಿಂದೆ ಮಾಡುವುದು

೨. ತಿಳಿಯದೇ ನಿಂತುಕೊಂಡೆ



ಶ್ರೀಮಾತಾರವಿದರಂದ(೨ ಅರ್ಥ): ಗುರು ನಮನ

ಶ್ರೀಮಾತಾ ಮತ್ತು ಶ್ರೀ ಆರೋಬಿಂದರ ಅಂದ

ಶ್ರೀಮಾತಾ + ಶ್ರೀ ಆರೋಬಿಂದೋ + ಅಂದ (ಅಂ ದ : ಅಂಬಿಕಾತನಯದತ್ತ)

Sunday, December 11, 2011

ಪಾರಿಜಾತ

ಉರುಳುರುಳುತ್ತಿರೋ ಮರುಳಿರುಳಲ್ಲಿ

ಕರುಳರಳುತ್ತಿದೆ ಕಾಣಲ್ಲಿ

ನರುಳರಳುತ್ತಿರೋ ಮನಸುಗಳಲ್ಲಿ

ತಿರುಳರಳುತ್ತಿದೆ ತಿಳಿಯಲ್ಲಿ



ಮಳೆ ತೊಳೆದು ಕೊಳೆ ಕಳೆದು

ನಿಂತಿರುವ ದೇಹವಿದು

ಹರ ಹರಿದು, ಕಳೆ ಕರೆದು

ಬರುತಿರುವ ಮನಸು



ನರ ನರರ ನರ ನಾಡಿ-

-ಗಳ ಒಳಗೆ ಹೊಕ್ಕಿರುವ

ನರಳಾಡೋ ಇರುಳಲ್ಲೇ ಅರಳುತಿಹುದು

ಮರುಳಾಳದಲ್ಲಿಯೇ ಅರಳುತಿಹುದು



ಕರಿ ಕರಿಯ ಇರುಳಲ್ಲಿ

ಪರಿ ಪರಿಯ ಪಾರಿಜಾತ

ಅಂಜದೆ ಅಳುಕದೆ ಅರಳುತಿಹುದು

ತನ್ನ ಕಂಪಿಂದ ಕಂಪಿಸಿ ಇರುಳನ್ನು, ಮರುಳನ್ನು

ಬೆಳಕಿನಾ ಊರಿಗೆ ಕರೆಯುತಿಹುದು

ಕಾಳಿಕಾನುಭವ

ಕರಿ ಇರುಳ ನೆರಳಲ್ಲಿ

ಭವದಿರುಳ ಮರುಳಲ್ಲಿ

ಬೆಳ್ಳಿ ಬಾನಿಗೆ ಬಾಳು ಕಾಯುತಿಹುದು

ಬರುವ ಬೆಳಕನು ನೆನೆಸಿ ನಲಿಯುತಿಹುದು



ಒಡಲ ಬಸಿರಲ್ಲಿ

ಹಳೆಯ ಕೆಸರಲ್ಲಿ

ಬರಿ ಗಾಳಿ ಬಿರುಗಾಳಿ ಆಗುತಿಹುದು

ಬರೋ ಗಾಳಿ ನಾ ಕಾಳಿ ಎನ್ನುತಿಹುದು



ತಾಯಿಯ ರಕ್ತಾಕ್ಷಿ-

-ಯಲಿ ನನ್ನ ಭಕ್ತಾಕ್ಷಿ

ಬೆಳಕ ಕಂಡು ಕಣ್ಣು ತುಂಬುತಿಹುದು

ಕಣ್ ತುಂಬ ತಾಯನ್ನೇ ತುಂಬುತಿಹುದು



ಕಾಳಿಯಾ ಕಣ್ಣಲ್ಲಿ

ಕಂಡೆನಾ ಬೆಳಕಲ್ಲಿ

ಹಾವೊಂದು ಒಳಗೆಲ್ಲೋ ಹರಿಯುತಿಹುದು

ಹೂ ತನ್ನ ದಳವೆಲ್ಲ ತೆರೆಯುತಿಹುದು