Monday, December 12, 2011

ಏಕಾಂತದ ದ್ವೀಪ


ಕೆಲವು ದಿನಗಳ ಹಿಂದೆ, ನನ್ನ ಗೆಳೆಯ ರುದ್ರಪ್ಪನವರು ಏಕಾಂತದ ದ್ವೀಪದ ಬಗ್ಗೆ ಬರೆದಿದ್ದರು( ಕನ್ನಡ ಬ್ಲಾಗ್ನಲ್ಲಿ ಪ್ರಕಟಿಸಿದ್ದರು). ಅದನ್ನು ಓದಿ, ನಾನು, ನನ್ನ ಏಕಾಂತದ ದ್ವೀಪವನ್ನು ಹುಡುಕುತ್ತ ಹೊರಟಾಗ.......ಈ ಸಾಲುಗಳು ಮೂಡಿ ಬಂದವು.



ಈ ಕವಿತೆಯಲ್ಲಿ, ಒಂದೇ ಶಬ್ದ ಅಥವಾ ಸಾಲುಗಳಿಗೆ ಹಲವು ಅರ್ಥಗಳು ಬರುವ ಹಾಗೆ ರೂಪಿಸುವ ಒಂದು ಪ್ರಯತ್ನ ಮಾಡಿದ್ದೇನೆ. ಇಷ್ಟವಾದಲ್ಲಿ ತಿಳಿಸಿ. ಇಷ್ಟವಾಗದಲ್ಲಿ ಕಡ್ಡಾಯವಾಗಿ ತಿಳಿಸಿ.



ಅದು ನಂದು ದ್ವೀಪ, ಆನಂದ ದ್ವೀಪ

ನಂದದಾ ಒಂದು ದೀಪ

ಅದು ಇರುವುದಲ್ಲಿ, ಬೆಳಕಿರುವುದಲ್ಲಿ

ಅದುವೇ ನಂದಾ ದೀಪ



ನೀ ಹಾರು ಹಾರು, ನೀರ್ ಆಳವಿಲ್ಲ

ನಿನ್ನ ಭಕ್ತಿ ಗಾತ್ರಕಿಂತ

ಮುಳುಗಿಸುವುದಲ್ಲ, ಬೆಳಗಿಸುವ ಕಡಲಿದು

ಅವನಿರುವ ಸೂತ್ರವಂತ



ಅದು ಇರುವುದಲ್ಲಿ, ಮನ ಕಾಣುವಲ್ಲಿ

ಅದು ಇಲ್ಲ ಇಲ್ಲ ದೂರ

ಉಕ್ಕುವ ಉಲ್ಕಾ ಕಡಲಿದು ಬಂದು

ಕರೆಯುತಿಹುದು ಬಾರಾ



ಇದರಾಳವೇಷ್ಟು ಇದರುಪ್ಪು ಎಷ್ಟು

ತಿಳಿಯದೆ ನಿಂದೆ ಬಂದು

ಮಧು ಮಧುರವೆಂದು

ದೈವಾಧರದಿಂದ ವಾಣಿ ಒಂದು ಬಂದು



ಅದೋ ಕಂಡ ಕಂದ, ಆನಂದ ಕಂದ

ಶ್ರೀಮಾತಾರವಿದರಂದ

ಅದರಂದ ತಂದ ಬೆಳಕಿಂದ ಬಂದ

ನವಜಾತ ಬಂದು ನಿಂದಾ



ಶಬ್ಧಗಳ ವಿವಿದಾರ್ಥಗಳು:

ನಂದದಾ ಒಂದು ದೀಪ (೩ ಅರ್ಥ):

೧. ನಂದೂ ಅದ ಒಂದು ದೀಪ; ನಂದೂ ಒಂದು ದೀಪ ಇದೆ

೨. ನಂದು ಅದಾ ಒಂದು ದೀಪ; ನಂದು ಇದೇ ಒಂದು ದೀಪ

೩. ನಂದಿ ಹೋಗದಾ , ಆರಿ ಹೋಗದಾ ದೀಪ

ಇದನ್ನು ಓದಿದ ರುದ್ರಪ್ಪನವರು, ಹೀಗೆ ಹೇಳಿದರು:

ಇದು ೩ ಅರ್ಥ ಅಲ್ಲ. ಇದು ಜಾಗೃತಿಯ ೩ ಘಟ್ಟಗಳು.

ಘಟ್ಟ ೧. ಹುಟ್ಟಿದಮೇಲೆ, ನನಗೂ ಒಂದು ದೀಪ ಇದೆ ಅನ್ನುವ ಅರಿವು

ಘಟ್ಟ ೨. ನಂದು ಅದೇ ಒಂದು ದೀಪ ಅಂತ ಗುರುತು ಹಿಡಿವ ಅರಿವು

ಘಟ್ಟ ೩. ನನ್ನದು ನಂದದಾ ದೀಪ ಅನ್ನುವ ಅರಿವು.

ಇಷ್ಟು ಸೂಕ್ತ ವಾಗಿ ವಿಶ್ಲೇಷಣೆ ಮಾಡಿದ ರುದ್ರಪ್ಪನವರಿಗೆ ನನ್ನ ಧನ್ಯವಾದಗಳು.



ಅವನಿರುವ ಸೂತ್ರವಂತ (೨ ಅರ್ಥ):

೧. ನಮ್ಮೆಲ್ಲಾರ ಸೂತ್ರ ಹಿಡಿದು ಕೊಂಡಿರುವವನು

೨. ನಾನು ಮುಳುಗಿದರೆ ಎತ್ತಲು ಸೂತ್ರ ಹಿಡಿದು ಕಾಯುತ್ತಿರುವವನು



ಮನ ಕಾಣುವಲ್ಲಿ(೨ ಅರ್ಥ):

೧. ಮನಸ್ಸಿಗೆ ಕಾಣಿಸುವಲ್ಲಿ

೨. ಮನಸ್ಸು (ನನ್ನ ನಿಜವಾದ ರೂಪ) ಕಾಣುವಲ್ಲಿ



ತಿಳಿಯದೆ ನಿಂದೆ ಬಂದು(೩ ಅರ್ಥ):

೧. ತಿಳಿಯದೇ ನಿಂದೆ ಮಾಡುವುದು

೨. ತಿಳಿಯದೇ ನಿಂತುಕೊಂಡೆ



ಶ್ರೀಮಾತಾರವಿದರಂದ(೨ ಅರ್ಥ): ಗುರು ನಮನ

ಶ್ರೀಮಾತಾ ಮತ್ತು ಶ್ರೀ ಆರೋಬಿಂದರ ಅಂದ

ಶ್ರೀಮಾತಾ + ಶ್ರೀ ಆರೋಬಿಂದೋ + ಅಂದ (ಅಂ ದ : ಅಂಬಿಕಾತನಯದತ್ತ)

No comments: