Thursday, November 10, 2011

ಭಾವ: "ಲಿಂಗೈಕ್ಯ " ವಾಗಲು ಜೀವ ತೊರೆಯುವ ಅಗತ್ಯವಿಲ್ಲ. ನಾನು ಬಾಳು ಬಾಳುವ ರೀತಿಯೇ ಸಾಕ್ಷಾತ್ಕಾರಕ್ಕೆ ದಾರಿ.




ಕವಿತೆಯಲ್ಲಿ ಶಿವನು ಹಲವು ರೂಪಗಳಲ್ಲಿ ಬರುತ್ತಿದ್ದಾನೆ. ಯಾಕೆಂದರೆ, ಶಿವನು ನಮಗೆ, ಸಂಸಾರದಲ್ಲೂ ಹಾಗೂ ಸ್ಮಶಾನದಲ್ಲೂ, ಈ ಎರಡೂ ಕಡೆಯೂ ನಮಗೆ ಅಧ್ಯಾತ್ಮದ ಪಾಠ ಕಲಿಸುವ ಏಕೈಕ ದೇವರು.

ಅವನು ಹೆಂಡತಿ ಮಕ್ಕಳು ಜೋತೆಗಿದ್ದಾಗಲೂ ಹಾಗೂ ಸ್ಮಶಾನದಲ್ಲಿ ಬೈರಾಗಿ ಆದಾಗಲೂ ಅಧ್ಯಾತ್ಮವನ್ನು ಹೇಗೆ ನಿಭಾಯಿಸಬೇಕು ಅಂತ ಹೇಳಿ ಕೊಟ್ಟಿದ್ದಾನೆ.



ಈ ಕವಿತೆಯಲ್ಲಿ ಕೂಡ ಕೆಲವು ವಾಕ್ಯಗಳಿಗೆ ಹಲವು ಅರ್ಥಗಳು ಇರುವ ಹಾಗೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿವಿಧಾರ್ಥಗಳನ್ನು ಕವಿತೆಯ ಕೆಳಗೆ ವಿವರಿಸಿದ್ದೇನೆ.





ಬಾರೋ ಬಾಳೇ ಪರಾಕು ನಿನಗೆ

ಹಾಳಾದರೆ ಬರಿ ಹಾಳೇ ನಿನಗೆ



ಮಂದ ದೇಹದಲಿ, ಅಂಧ ಹೃದಯವಿದು

ಚಂದ ಚಂದ ಮನವು

ಸಂದ ಕಡಲಿನಲಿ, ಮಿಂದ ಮನಕೆ

ಪ್ರಜ್ಞ್ಯಾ ಪ್ರಸಾದ ನಿಜವು



ಓ ನನ್ನ ಶಿವನೆ, ಬಾ ಎಂದು ಒಡನೆ

ಬರಬೇಕು ಬೇಕು ನೀನು

ನಾ ನಿನ್ನ ನೋಡಲು, ನಿನ್ನ ಸೇರಲು

ಜವನ ದಾಟಬೇಕೆನು?



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ

ಇದು ನನ್ನ ಪಕ್ಷಿ, ಇದು ನನ್ನ ಅಕ್ಷಿ

ಹಾರೀತೋ ಬಾಳಿ ಬಾಳಿ



ನನ್ನ ಚಿತ್ತವು ಚಿತ್ರಿಸೋ ಚಿತ್ರವೂ ನೀನು

ಬಾಳೆಂಬುದಕೆ ಅರ್ಥವೂ ನೀನು

ಜೊಂಪನು ಕಂಪಿಸೋ ರುದ್ರನು ನೀನು

ಬಾಳು ಬೆಳಗಲು ಭದ್ರನು ನೀನು





ಹಾಳಾದರೆ ಬರಿ ಹಾಳೇ ನಿನಗೆ (೨ ಅರ್ಥ):

೧. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ, ನೀನೂ, ನಿನ್ನ ಘನತೆಯೂ ಹಾಳಾದಂತೆ.

೨. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ. ನನ್ನ ಬಾಳು ಖಾಲಿ ಹಾಳೆಯಂತೆ. ಅದನ್ನು ತುಂಬಿಸುವ ಎಲ್ಲ ಜವಾಬ್ದಾರಿಯೂ ನಿನ್ನದೇ.ಶರಣಾಗತಿ ಭಾವ.



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ (೨ ಅರ್ಥ):

೧. ಪ್ರಾಣ ಪಕ್ಷಿ ಹಾರಿಹೋಗಿ, ಜೀವ ಹೊರಟು ಹೋಗಿ. ಅದು ಲಿಂಗೈಕ್ಯ ವಾಗುವುದು.

೨. ಧ್ಯಾನ ಮಾಡುವಾಗ, ಪ್ರಾಣ/ಉಸಿರಿನ ಮೇಲೆ ಗಮನ ಇಟ್ಟುಕೊಂಡಾಗ. ಪ್ರಾಣ ರೂಪಿಯಾದ ಪಕ್ಷಿ, ನಮ್ಮ ದೇಹದ ಹೊರಗೂ ಒಳಗೂ ಹಾರುತ್ತಿರುವಾಗ ಆಗುವ ಜ್ಞಾನೋದಯ ಕೂಡ ಲಿಂಗೈಕ್ಯಾನುಭೂತಿಯೇ ಸರಿ.



ಬಾಳು ಬೆಳಗಲು ಭದ್ರನು ನೀನು (೨ ಅರ್ಥ):

೧. ನನ್ನ ಬಾಳು ಬೆಳಗಲು, ಹೇ ಶಿವನೆ ನೀನೆ ಬೇಕು.

೨. ನನ್ನ ಬಾಳು ಬೆಳಗಿದರೆ, ನಿನ್ನ ಘನತೆಯೂ ಭದ್ರ.





No comments: