Monday, September 10, 2012

ಸಾರಾಯಿ ಸಿದ್ದ

ಮುನ್ನುಡಿ:

ಈ ಕೆಳಗಿನ ಸಾಲುಗಳು, ಒಂದು ಸಾರಾಯಿ ಅಂಗಡಿಯ ಸುತ್ತ ಹುಟ್ಟಿದಂತ ಸಾಲುಗಳು. ಆ ಅಂಗಡಿಗೆ 'ಸಿದ್ದ' ಎನ್ನುವವನು ಮಾಲೀಕ. ಮೇಲುನೋಟಕ್ಕೆ, ಈ ಸಾಲುಗಳು, ಆ ಅಂಗಡಿಯಲ್ಲಿ ನಡೆಯುವ ದಿನನಿತ್ಯದ ಸಾಧಾರಣ ಸಂಗತಿಗಳನ್ನು ಹೇಳುತ್ತವೆ.

ಆದರೆ ಈ ಸಾಲುಗಳ ಒಳಗೆ ಹೊಕ್ಕು ನೋಡಿದಾಗ ಅದರಲ್ಲಿ ಸಿಗುವ ಸರಾಯಿಯೆ ಬೇರೆ.

ಇಲ್ಲಿ ಸಿದ್ದನು, ಪರಮಾತ್ಮ. ಸಾರಾಯಿ ಅಂಗಡಿ ಎನ್ನುವುದು ಅವನು ಇರುವ ಸ್ಥಳ. ನಾನು ಆ ಸಾರಾಯಿ ಅಂಗಡಿಗೆ ಹೋಗುವ/ಹೋಗಲು ಬಯಸುವ ಒಬ್ಬ ಕುಡುಕ. ಅವನು ನಮಗೆ ನೀಡುವ ಸಾರಾಯಿ ಎಂದರೆ, ನಮ್ಮ ಜೀವನದಲ್ಲಿ ಅವನು ನಮಗೆ ದಯಪಾಲಿಸುವ ಕಷ್ಟ-ಸುಖಗಳು. ಅವನು ಯಾರಿಗೂ ಒಂದೇ ತರಹದ ಸಾರಾಯಿ ನೀಡುವುದಿಲ್ಲ. ಅವನು ಯಾವುದೇ ಸಾರಾಯಿ ನೀಡಿದರೂ ಅದನ್ನು ಭಕ್ತಿಯಿಂದ ಕುಡಿಯುವುದು ನನ್ನ ಧರ್ಮ. ಆ ಸಾರಾಯಿ ಕುಡಿದ ಮೇಲೆ ನನಗೆ ಬರುವ ಮತ್ತು(ಉನ್ಮತ್ತತೆ) ನನ್ನ ಜೀವನದ ಅನುಭವ. ಆ ಮತ್ತು ನನ್ನದು. ಆ ಮತ್ತು ನನ್ನ ಜೀವನ ಸತ್ಯವನ್ನು ನನಗೆ ಸಾಕ್ಷಾತ್ಕರಿಸುವ ಸತ್ಯವೂ ಹೌದು. ಆ ಸಾಕ್ಷಾತ್ಕಾರವೇ ನನ್ನ ಜೀವನದ ಧ್ಯೇಯ. ಅವನ ಸಾರಾಯಿ ಕುಡಿದು, ಆ ಮತ್ತಿನಲ್ಲಿ ತೂರಾಡುವುದರಲ್ಲೇ ನನ್ನ ಈ ಜನ್ಮದ ಸಾರ್ಥಕತೆ.



ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಶೇಷವೆಂದರೆ, ಈ ಸಾಲುಗಳಲ್ಲಿ ಬರುವ ಪಾತ್ರಗಳು ಹಲವಾದರೂ, ಇಲ್ಲಿ ಹೆಸರು ಇರುವುದು ಸಿದ್ದನಿಗೆ ಮಾತ್ರ. ನಾನು ಮತ್ತು ಬೇರೆ ಎಲ್ಲರೂ ಕೂಡ ಗ್ರಾಹಕರೇ ಹೊರತು ಅವರಿಗೆ ಅವರದೇ ಆದ ಹೆಸರು ಹಾಗು ಮುಖಗಳಿಲ್ಲ. ಅವರ ಗುರುತು ಅಂದರೆ ಅವರು ಸಿದ್ದನ ಗ್ರಾಹಕರು ಎನ್ನುವುದು ಮಾತ್ರ.




1. ನನ್ ದಾರೀಲ್ ನಾನ್ ಹೊಂಟೀನ್ ನೋಡು ಹೆಂಡ್ತಿ ಮಕ್ಕಳ್ ತಾಕೆ

ಕಾಣದ್ ಹುಳಿ ಹೆಂಡದ್ ವಾಸ್ನೇ, ಮೂಗ್ದಾರ್ಧಂಗ್ ಏಳೀತದ್ಯಾಕೆ?

ಬಲ್ ನನ್ ಮಗ ಸಿದ್ದ ಅವ್ನು, ಏನಾರ ತಂತ್ರ ಹೂಡಿ

ಎಳ್ಕೊಂಡ್ ಬಿಡ್ತಾನ್ ನನ್ನ ಅಲ್ಗೆ, ಸರ್ಯಾದ್ ಸಮಯ ನೋಡಿ



ಭಾವ: ನಾವು ನಮ್ಮದೇ ಆದ ದಾರೀಲಿ ಹೊರಟರೆ, ಸಿದ್ದ, ನಮಗೆ ಮೂಗ್ ದಾರ ಹಾಕಿ ಸರಿಯಾದ ಸಮಯದಲ್ಲಿ ಅವನ ಕಡೆಗೆ ಎಳ್ಕೊಂಡ್ ಬಿಡ್ತಾನೆ.



-----------------------------------------------------


2. ಏನ್ ಬುಡ್ತೌನೋ ನಂಗೊತ್ತಿಲ್ಲ, ಸಿದ್ದ ಬುಂಡೆ ಒಳ್ಕೆ

ಕುಡ್ರೆ ಪರಮಾತ್ಮ ಕಾಣ್ತೌನೆ, ಸಾಟಿ ಇಲ್ಲ ಅದ್ಕೆ

ಕುಡ್ಕ ನಾನು, ದಿನಾ ಹೋಗ್ತೀವ್ನ್, ಸಿದ್ದಪ್ಪನ್ ಅಂಗಡೀ ತಾಕೆ

ಸರಾಯಿ ಅಂಗ್ಡೀಗ್ ಬರಲ್ ಅನ್ದೊರ್ಗ್ ಬುಡ್ರೀ ತಲೀ ಮ್ಯಾಕೆ



-----------------------------------------------------

3. ಕೂಲಿ ಮಾಡಿದ್ ಮೈ ಕೈ ನೋವು, ಸರಾಯಿ ಜೋತೀಗ್ ಮಾಯಾ

ನಾಳಿನ್ ಕೂಲೀಗ್ ಹಾಕ್ತದ್ ಕಾಣೋ ಸಿದ್ದನ್ ಸರಾಯಿ ಪಾಯಾ

ಮುಕಾನ್ ಕೀವಿಚ್ಕೊಂಡ್ ಕುಡ್ದೂರ್ ಎಲ್ಲ, ತೂರಾಡ್ತಾರೆ ಕಾಯಾ

ಸರಾಯಿ ಅಂಗ್ಡೀಗ್ ಬರ್ದೋದ್ ಜನ, ಎಲ್ಲನ್ ಬಿದ್ದು ಸಾಯಾ



ಭಾವ: ನಾವು ಇಲ್ಲಿ ಬಂದಿರೋದು ಸಿದ್ದನ ಕೂಲಿ ಮಾಡಲಿಕ್ಕೆ.

'ನಾಳಿನ್ ಕೂಲಿ' ಅಂದ್ರೆ, ಮುಂದಿನ ಜನ್ಮ. 'ಮುಕಾನ್ ಕೀವಿಚ್ಕೊಂಡ್' ಅಂದ್ರೆ, ಸಿದ್ದನ ಕಾಣುವ ಸಾಧನೆಯ ದಾರೀಲಿ ಕಷ್ಟ ಪಟ್ಟವರು.

-----------------------------------------------------

4. ಕೂಲಿ ಮಾಡ್ದೇ ಸಾರಾಯಿ ಕುಡಿಯಾಕ್ ಏನ್ ಮಜಾ ಐತೇಳು

ತಲ್ ಕೆರ್ಕೊಂಡ್,ಹಲ್ ಗಿಂಜದೆ ಹೋದ್ರೆ, ಸರಾಯಿ ನಾಗ್ ಮತ್ತಿಲ್ಲೇಳು

ಸಿದ್ದನ್ಗೂನೆ ನಮ್ಗ್ ಬೈದೆ ಹೋದ್ರೆ, ನಿದ್ದೆ ಬರತೈತಾ ಕೇಳು

ಜೀವ್ನ ಎಲ್ಲ,ಹಗ್ ಜಗ್ಗಾಟ್ದಂಗೆ ಎಳೆದಾಡ್ ಬೇಕ್,ಸಿದ್ದನ್ ಕೇಳು


ಭಾವ: ಸಿದ್ದನ ಎದುರಿಗೆ ಕೈ ಕಟ್ಕೊಂಡು, ಹಲ್ ಗಿಂಜಿ ಕೊಂಡು, ಬೇಡದೆ ಇದ್ರೆ ನಮಗೆ ಸಮಾಧಾನ ಇಲ್ಲ. ನಮಗೆ ಕಷ್ಟ ಕೊಡದೇ ಇದ್ರೆ ಅವನಿಗೆ ನಿದ್ದೆ ಇಲ್ಲ. ಈ ಹಗ್ಗ ಜಗ್ಗಾಟದ ಆಟವೇ ಜೀವನ. ಅಲ್ಲಿಗೂ ಕೂಲಿ ಮಾಡ್ದೇ(ಸಾಧನೆ ಮಾಡ್ದೇ) ಅವನ ಸಾರಾಯಿ ಕುಡಿಯೋದರಲ್ಲಿ ಸುಖವಿಲ್ಲ.

-----------------------------------------------------

5. ಇಂದ್ರ ಇವ್ನೇ, ಚಂದ್ರ ಇವ್ನೇ, ಸಿದ್ದಪ್ನೇ ಎಲ್ಲಾ ನಂಗೆ

ಬುಂಡೇಲ್ ಹುಳಿ ಸಾರಾಯಿ ಕೊಂಚ, ಎಚ್ಗೆ ಬುಡ್ತೌನ್ ನಂಗೆ

“ನಮ್ಮಿಬರ್ದ್ ಇದು ಗುಟ್ಟು....” ಅಂತ ಅವ್ನೇಳೌನೆ ನಂಗೆ

ಕುಡ್ಕನ್ ಬಾಯಿ ಒಸಿ ಸಡ್ಲ , ಗುಟ್ ನಿಲ್ಲಾ ಕಿಲ್ಲಾ ಒಳ್ಕೆ



ಭಾವ: ಕಷ್ಟದಲ್ಲಿ ಆದರೂ ಸುಖದಲ್ಲಿ ಆದರೂ, ಅವನು ನನ್ನ ಪರವಾಗಿಯೇ ಇದ್ದಾನೆ ಅಂತ ಅಂದು ಕೊಳ್ಳುವುದು ಒಂದು ಒಳ್ಳೆ ಅಭ್ಯಾಸ. ಎರಡನ್ನೂ ಅವನು ನನಗೇ ಸ್ವಲ್ಪ ಹೆಚ್ಚಿಗೆ ಕೊಡ್ತಾನೆ ಎನ್ನುವುದು ನಮ್ಮೆಲ್ಲರ ಭಾವನೆ. ಇದು ನನ್ನ ನಮ್ಮ ಗುಟ್ಟು. ನಾನು ಕುದುಕನಾದದ್ದರಿಂದ ಈ ಗುಟ್ಟು ಹೊರಗೆ ಬಂದಿದೆ ಅಷ್ಟೇ.

-----------------------------------------------------

6. ಮೂಗ್ ಮುಚ್ ಕೊಂಡ್ರೆ ಚಿಕ್ ಮಕ್ಕಳ್ಗೆ, ಬಾಯಲ್ ಉಇತಾರ್ ಎಂಡಾ

ರಾತಿ ಎಲ್ಲಾ ಜಗ್ಲಾಡ್ತಾರೆ, ಕುಡ್ಕೊಂಡ್ ಬಂದ್ರೆ ಗಂಡ

ತಪ್ ಗಂಡನ್ದಲ್ಲ, ಯೆಡ್ತೀದಲ್ಲ, ಕೂಸಿಂದು ಅಲ್ವೇ ಅಲ್ಲಾ

ಸಿದ್ದನ್ ಸಾರಾಯಿ ಮತ್ತಿನ್ ಗಮ್ಮತ್, ಬಾಯಾಗ್ ಹೇಳಕ್ಕಲ್ಲ

ಭಾವ: ನಾವೆಲ್ಲರೂ ನಮ್ಮ ನಮ್ಮ ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆದರ್ಶ ಅಂತ ಇಟ್ಟುಕೊಂಡಿರ್ತೇವೆ. ಆ ನಮ್ಮ ಗುಣಕ್ಕೆ ಆ ಸಿದ್ದಾನೆ ಕಾರಣ. ಅವನ ಆಟವನ್ನು ಬಾಯಲ್ಲಿ ಹೇಳಕ್ಕೆ ಆಗದು.


-----------------------------------------------------

7. ಇನ್ಯಾರ್ಗೆನೋ ನಂಗೊತ್ತಿಲ್ಲ, ನಂಗೆ ನೀನೇ ದ್ಯಾವ್ರು

ನಿನ್ ಅಂಗ್ಡೀನೇ ದೇವಸ್ತಾನ, ಬ್ಯಾರೆವ್ರ್ ಅನ್ಬೈದ್ ಬಾರು

ಹುಳಿ ಸಾರಾಯಿ ಧೂಪದಾಗ್ ಕುಂತೌನ್ ನೋಡೋ ನಮ್ ಸಿದ್ದಪ್ಪ

ಅಂಗಡೀಗ್ ಬಂದೊರ್ಗ್ ಸಾರಾಯಿ ಸಿಕ್ತು, ಬರ್ದೊರ್...... ಐಯೋ ಪಾಪ......



-----------------------------------------------------


8. ಕರಪೂರ್ದ್ ನೀರಾಗ್ ತುಳಸಿ ಹಾಕ್ ಕೊಂಡ್ ಕುಡೀತಾರೆ ಜನ

ಮಣ್ಣಿನ್ ಬುಂಡೇಲ್ ಸರಾಯ್ ಕುಡಿಯಾಕ್ ಯಾಕ್ ಹೆದರ್ತಾರೆ ಜನ

ಹಿಂಗ್ಹಲ್ಹಂಗಂತ್ ಹೇಳಿದ್ರೂನೆ, ಹಂಗಲ್ ಅಂತಾರ್ ಜನ

ಹೆಂಗಾರ್ ಮಾಡ್ಕೊಳ್ ಅಂದ್ರೆ ನನ್ನೇ ಕುಡುಕ್ಹನ್ತಾರೆ ಜನ



-----------------------------------------------------

9. ಸಿದ್ದನ್ ಅಂಗಡೀಲಿ ಒಂದೇ ಒಂದು ದೀಪ ಬೆಳಗ್ತಾನ್ ಅವ್ನು

ಎಲ್ಲರ ನೆತ್ತೀಗ್ ಬೀಳ್ಲಿ ಅಂತ ಮ್ಯಾಗ್ ಇಟ್ಟಿರ್ತಾನ್ ಕಾಣು

ಸಾದ್ವಾದಷ್ಟು ದೀಪದ್ ಕೆಳಿಕ್ಕೆ ಕುಂತ್ಕೋ ಜಾಣ ನೀನು

ಸಿದ್ದನ್ ಸರಾಯ್ ಹೀರು ನೀನು, ನೆರಳು* ಬುಡಕ್ ಬಿದ್ದಿರ್ತಾದ್ ಕಾಣು


ಭಾವ: ನೆರಳು ಅಂದರೆ, ಅಜ್ಞಾನದ ಕತ್ತಲು. ದೀಪದ ಕೆಳಗೆ ಕೂತ್ಕೊಂಡ್ರೆ ಅಜ್ಞಾನದ ಆ ನೆರಳು ಚಿಕ್ಕದಾಗಿಯೂ ಹಾಗೂ ಅದು ನಮ್ಮ ಕೆಳಕ್ಕೆ ಬಂದು ಸೇರಿರುತ್ತದೆ. ಅಲ್ಲಿಗೆ ನಾವು ಆ ಅಜ್ಞಾನವನ್ನು ಮೆಟ್ಟಿದ ಹಾಗೆ. ಅದು ನಮ್ಮ ಬುಡದ ಕೆಳಕ್ಕೆ ಹೋಗಿ ಬಿಡುತ್ತೆ ಅಂತ.



-----------------------------------------------------


10. "ಬರ್ ಬರೀ ಲೇ... " ಅನ್ತೌನ್ ಸಿದ್ದ, ಸಾರಾಯಿ ಕುಡೀಸ್ ಬುಟ್ಟಿ

ಅವ್ನ್ ಏಳಿದ್ ಪದಾನ ಅಂಗೇ ಬರ್ಕಂತೀನ್, ಅವ್ಗಲ್ ಬಾಳಾ ತುಟ್ಟಿ

ಬರದಿದ್ ಪದಾನ ಜನಕ್ ಏಳಿದ್ರೆ, ಅವ್ಕೇನ್ ತಿಳೀತೋ ಕಾಣೆ

ಗುಟ್ಟಿನ್ ವಿಸ್ಯ ಒಂದ್ ಏಳ್ತೇವ್ನಿ, ನಂಗೂ ತಿಳೀವ್ ಅವ್, ನನ್ ಆಣೆ....



ಭಾವ: ನಾನು ಬರೆಯೋ ಸಾಲುಗಳೆಲ್ಲ, ಆ ಸಿದ್ದನು ನನಗೇ ಸಾರಾಯಿ ಕುಡಿಸಿ "ಬರಿ" ಅಂತ ಅಂದಾಗ ಬರೆಯುವ ಸಾಲುಗಳು. ನಾನು ಆ ಮತ್ತಿನಲ್ಲಿ ಇದ್ದಾಗ ಅವನು ನನಗೆ ಬರಿ ಅಂತ ಅಂದು, ಅವನು ಹೇಳುವ ಸಾಲುಗಳನ್ನು ನಾನು ಹಾಗೆಯೇ ಬರೆದುಕೊಂಡು ಬಿಡುತ್ತೇನೆ.

-----------------------------------------------------

11. ಎದ್ರೀಗ್ ಕುಂತೊವ್ನ್ ಕಾಣಾಕ್ ಮನ್ಸ ಯಾಕೋ ತಿರ್ಗಾಡ್ತಿ

ಕಣ್ಣಾಗ್ ಇರೋನು ಕಾಣ್ಸಾಕಿಲ್ಲ ಅಂತ ಪದ್ವಾಡ್ತೀ

ಕುಡುಕನ್ ಜೀವ್ನ ಲೇಸು ಕಣ್ಲ, ಕುಡೀದೆ ಯಾಕ್ ಸಾಯ್ತೀ

ಬುಂಡೇನೇ ಮುಟ್ಟಕ್ ಆಗ್ದೋದ್ ಮನ್ಸ, ದೇವ್ರನ್ ನೋಡ್ ಏನ್ ಮಾಡ್ತೀ



ಭಾವ: ನಮ್ಮ ಎದುರಿಗೆ ಹಾಗೂ ನಮ್ಮ ಒಳಗೆ ಇರುವ ಸಿದ್ದನನ್ನು ಕಾಣಲು ಮನುಷ್ಯ ಎಷ್ಟು ಕಷ್ಟಪಡ್ತೀಯೋ?

ಸಿದ್ದನ ಸಾರಾಯಿ ಕುದಿತೋ ತನಕ ನಿನಗೆ ಈ ಸತ್ಯ ಗೊತ್ತಾಗುವುದಿಲ್ಲ.

-----------------------------------------------------

12. ಒಳಿಕ್ ಸಾರಾಯಿ ಓದ್ರೆ ನಂಗೆ, ದುಃಖ ಓಡ್ ಬರ್ತೈತ್ ಒರಿಕ್ಕೆ

ಬಡ್ ಬಡ್ ಅಂತ ಬಡ್ಬಡಾಯಿಸ್ತೀನ್, ಸಿದ್ ಇದ್ರೆ ಜೋತೀಕೆ

ಕುಡ್ಸೋನ್ ಅವ್ನು,ಕುಡ್ಯೋನ್ ನಾನು, ನೀನ್ಯಾರ್ಲಾ ಕೇಳಾಕೆ

ನಮ್ ಸಂಬಂದ್ ದಾಗ್ ಮೂಗ್ ತೋರ್ಸಾಕ್ ಬಂದ್ರೆ, ಇರಲ್ಲ ಸರ್ಯಾಕೆ

-----------------------------------------------------


13. ಸಾಲ ಮಾಡಿದ್ ಸಾರಾಯಿನಾಗೆ, ಏನೋ ಒಂದು ಮತ್ತು

ಸಾಲ ಮಾತ್ರ ಸಿದ್ದನ್ ತಾವೇ ಮಾಡ್ ಬೇಕ್ ಅಂತ್ ನಂಗ್ ಗೊತ್ತು

ಸಾಲ್ ಕೇಳಿದ್ರೆ, ಬೈತನ್ ಸಿದ್ದ, ಆದರೂ ಅವ್ನ್ ಮನ್ಸ್ ಮೆತ್ತು

ಕೇಳ್ದೆ ಓದ್ರೂ ಬೈಕೊಂತಾನೆ, ಆವತ್ ನಾನ್ ಕಡ್ಮೆ ಕುಡ್ದೀನ್ ಅಂತ್ ಅವಗ್ ಗೊತ್ತು



-----------------------------------------------------

14. ಸಿದ್ದಪ್ಪಣ್ಣ ಕೇಳ್ತೀನ್ ಒಂದು ಗುಟ್ಟಿನ್ ವಿಸ್ಯ ನಿಂಗೆ

ಈಸೊಂದ್ ಸಾರಾಯಿ ನಿನ್ ತಾವ್ ಐತೆ, ನೀನ್ ಕುಡೀತಿ ಏನಾರ್ ಎಂಗೆ?

ಇರ್ಲಿ ಏಳು ನನ್ ತಾವ್ ವಿಸ್ಯ, ನಾನ್ ಯಾರ್ಗ್ ಏಳಾಕಿಲ್ಲ

ಏಳಿದ್ರೂನೆ, ಕುಡ್ಕಾ ನಾನು, ಜನ ನನ್ ಮಾತ್ ನಂಬಾಕಿಲ್ಲ



ಭಾವ: ನಮಗೆ ಕಷ್ಟ-ಸುಖ ಕೊಡುವ ದೇವರಿಗೂ ಕಷ್ಟ -ಸುಖ ಅಂತ ಇರುತ್ತಾ? ಅಥವ ನಮ್ಮ ಕಷ್ಟ-ಸುಖದಲ್ಲೇ ಅವನು ಅವನ ಕಷ್ಟ-ಸುಖ ಕಂಡು ಕೊಳ್ತಾನ?

ಇರ್ಲಿ ಸಿದ್ದಪ್ಪ, ನನ್ನ ಹತ್ರ ಹೇಳು ನಿನ್ನ ಗುಟ್ಟು.

ನನಗೆ ನಿನ್ನ ಗುಟ್ಟು ಗೊತ್ತು, ಅಂತ ಅಂದ್ರೂ, ಈ ಜಗತ್ನಲ್ಲಿ ನಂಬೋ ಜನ ಇಲ್ಲ.



-----------------------------------------------------

ನಸಕ್ ನಸಕ್ಲೇ ಮುಸ್ಕ್ ಹೊದ್ಕೊಂಡ್ ಮಲಗಿದ್ ಮನ್ಸಾ ನಾನು


ಯಾವ್ದೋ ಗಾಳಿ ಬೀಸ್ ಎಬ್ಬಿಸ್ತು, ಯಾವ್ದದ್ ಅಣ್ಣಾ ಕಾಣು

ಎದ್ ಬಿಟ್ ಕೂಡ್ಲೇ, ಎದ್-ಬಿದ್ ಓಡ್ದೆ , ಸಿದ್ದನ್ ಅಂಗಡೀಗ್ ನಾನು

"ನಿಂಗೇ ಕಾದ್ಕೊಂಡ್ ಕುಂತೀನ್....ಬಾರೋ" ಅಂದ, ಸಿದ್ದ ನಗ್ಕೊಂತ್ ಕಾಣು



---------------------------------------------------------------------------------------------


ಯೇಸೊಂದ್ ಮಕ್ಳ್ ಇದಾವ್ ನನ್ ಮನ್ಯಾಗ್, ಯಾರ್ನ್ ಹಿಡ್ಕೊಳ್ ಯಾರ್ನ್ ಬುಡ್ಲೀ

ಬೆನ್ನೀಗ್ ಕಟ್ಕೊಂಡ್ ಸಿದ್ದನ್ ಅಂಗ್ಡೀಗ್ ಹೋಗದೆ, ಇವ್ಗಳ್ನ್ ಒಬ್ಬರ್ನೆ ಯಲ್ ಬುಡ್ಲೀ

ಇವ್ಕೂ ದಿನಾ ಸರಾಯಿ ಕುಡ್ಸೀ ಬೇಳೆಸ್ ಬೇಕು ನಾನು

ಒಂದ್ ದಿನ ಇವ್ಗಳ್ ದೊಡ್ದವ್ರಾಗಿ ಆಕಾಶ್ದಲ್ ತೂರಾಡ್ತಾವ್ ಕಾಣು



---------------------------------------------------------------------------------------------

ಈಚಲ್ ಮರ್ದಾಗ್ ಕೂತ್ಕೊಂಡ್ ಕುಡದ್ರೆ, ಸಾರಾಯಿ ರುಚಿ ಕೊಂಚ ಜಾಸ್ತಿ

ಈಚಲ್ ಹಣ್ಣೇ ಆಗೊದ್ರಣ್ಣ, ಬೇಡ ಇನ್ಯಾವ್ದ್ ಆಸ್ತಿ

ಸಿದ್ದನೂ ಅವೇ ಹಣ್ ಕಿತ್ಕೊಂಡು ಸಾರಾಯಿ ಮಾಡೋದಂತೆ

ತಲ್ ಕೆಳ್ಗಿರೋ ಈಚಲ್ ಮರ್ ದಲ್ ಹಣ್ ಆದ್ರ್ ಎಲ್ಲಾ, ಇಲ್ ಯಾರ್ಗ್ ಎನೈತ್ ಚಿಂತೆ



---------------------------------------------------------------------------------------------


ಸಿದ್ದನ್ ಅಂಗ್ಡೀಗ್ ಹೋಗೋ ದಾರಿ ಒಂದ್ ನಾನ್ ತಿಳ್ಕೊಂಡಿವ್ನಿ

ನಿನಗೂ ತೋರಿಸ್ಬೇಕ್ ಅದನ್ನ ಅಂತ್ ನಾನ್ ಅಂದ್ಕೊಂಡಿವ್ನಿ

ನಂಗೂ ನಿಂಗೂ, ಆ ದಾರಿ ನೋಡು, ಬೇಧ ಮಾಡೋಲ್ವಂತೆ

ರಾಜನ್ ಕೂಡ ಅದೇ ದಾರೀಲ್, ನೋಡ್ ಎಳ್ಕೊಂಡ್ ಹೋಗ್ತಾರಂತೆ



---------------------------------------------------------------------------------------------


ಊರಾಚೆ ಇರೋ ಪಾಳ್ ಅರ್ಮನ್ಯಾಗ್, ಹಲ್ಲಿ-ತೋಳ ಕೂಗ್ತಾವಂತೆ

ಅದ್ರಾಗಿರೋ ಸಿಮ್ಹಾಸಂದಾಗ್ ಇಲಿಗಳ್ ಕೂರ್ತಾವಂತೆ

ಯಾರ್ ಯಾರ್ ಎಲ್ ಎಲ್ ಕೂರ್ತೌರ್ ನೋಡು, ಇದು ಯಂಥ ಕರ್ಮ

ಸಿದ್ದನ್ ಅಂಗ್ದೀ ಜಗ್ಲೀನೇ ಸಾಸ್ವತ ನಮ್ಗೆ, ಇದ್ರಾಗೆನೈತ್ ಮರ್ಮ



---------------------------------------------------------------------------------------------



ಈಚಲ್ ಮರದ್ ಕೆಳಿಕ್ ಬಾಳಾ ತಂಪು, ಸರಾಯಿಗು ಬರ್ತೈತ್ ಜೋಂಪು

ಕಾಗ್ದದಲ್ ಗೀಚ್ಕೊಂಡ್ ಪದ್ವಾಡ್ತಿದ್ರೆ, ಮರೀಬೋದ್ ಎಲ್ಲ ನೆಂಪು

ಸಿದ್ದ್ನೂ ಅಲ್ಗೆ ಬರ್ತಿರ್ತೊವ್ನೆ, ಹಣ್ಗಳ್ ಕಿತ್ತ್ ಕೊಳ್ಳೋಕೆ

ಅದೇ ಹಣ್ ನಲ್ ಸಾರಾಯ್ ಬಸ್ದು, ಅಂಗ್ಡೀಗ್ ಬಂದೊರ್ಗ್ ಕೊಡೋಕೆ



---------------------------------------------------------------------------------------------



ನಾನೂ, ಸಾರಾಯ್ ಸೇರ್ ಕೊಂಡ್ ಮತ್ತನಲ್ ಸಿದ್ದನ್ ಕಾಣ್ತೀವ್ ನೋಡು

ಕಂಡದ್, ಕಾಣದ್ ಅನ್ಬೈಸಿದ್ದು ಪದ್ವಾಡ್ತೀವಿ ನೋಡು

ಸಿದ್ದನ್ ಅಂಗಡೀಲ್ ಸಿಗೋ ಜ್ಞಾನ, ಇನ್ನೆಲ್ ಸಿಗಾಕಿಲ್ಲ

ಸಾರಾಯ್ ಮತ್ತಿನ್ ಗಮ್ಮತ್ ಅಣ್ಣ ಹೇಳಿದ್ರ ತಿಳಿಯಾಕಿಲ್ಲ



"ಓಂ ತತ್ ಸತ್ "



ಸತ್: ದೇವರ ಮೂರ್ತ ಸ್ವರೂಪ, ಪ್ರತ್ಯಕ್ಷ್ಯ ವಾದುದು,

ತತ್: ದೇವರ ಅಮೂರ್ತ ಸ್ವರೂಪ

ಓಂ: ಮೂರ್ತ ಹಾಗೂ ಅಮೂರ್ತ ಸ್ವರೂಪಗಳೆರಡೂ ಒಂದೇ ಹಾಗೂ ಎಅದೂ ಒಂದೇ ಶಕ್ತಿಯ ರೂಪಕಗಳು ಎಂದು ತಿಳಿಸುವ ಅರಿವು.

ಆತ್ಮ ಸಾಕ್ಷಾತ್ಕಾರ ಅನುಭೂತಿ.



ಇಲ್ಲಿ,

ನಾನು: ಸತ್

ಸರಾಯಿ:ತತ್

ಮತ್ತು: ಓಂ



---------------------------------------------------------------------------------------------



ಜಳಕ ಮಾಡಿ ಹಚ್ಕೊಂಡಿದ್, ಪಟ್ಟೆ- ನಾಮ ಅಳ್ಸ್ ವೈತು

ಕೂಲಿ ಮಾಡಿದ್ ಬೆವಿರ್ನಾಗೆ, ಎಲ್ಲಾ ಕೊಚ್ಕೊಂಡ್ ವೈತು

ಆದರೂ ಕೂಡ ಒಂದ್ ತೊಟ್ಟ್ ಆಸೆ ಮನ್ಸಾಗ್ ಉಳ್ಕೊಂಡ್ ಬಿಡ್ತು

ಸಾರಾಯ್ ಕುಡೀದೆ ಮಲ್ಗಾಕ್ ಮನಸ್ ಯಾಕೋ ವಪ್ಪದೆ ವೈತು



ಮೈ ತೊಳ್ಕೊಂಡು, ಅಥವಾ ಮೈ ಪದರ ತೊಳೆದುಕೊಂಡು ನಾಮ-ಪಟ್ಟೆ ಹಚ್ಕೊಂಡಿದ್ದೆಲ್ಲ ಮೇಲಿನ ಶೃಂಗಾರಗಳು,

ಸಾಧನೆಯ ಹಾದಿಯಲ್ಲಿ ಶ್ರಮಿಸಿದಾಗ ಮಾಯವಾಗುತ್ತವೆ. ಎಲ್ಲಾ ಆಸೆ ಬಿಟ್ಟೆ ಅಂತ ಅಂದವನಿಗೂ, ಮೋಕ್ಷದ ಆಸೆ ಬಿಡಲಿಲ್ಲ.



---------------------------------------------------------------------------------------------





ತೋರ್ಣ ಕಟ್ ಬುಟ್, ರಂಗೋಲಿ ಬುಟ್ ಬುಟ್ ಕಾಯ್ಬೇಕ್ ಅಂತಾರ್ ಜನ

ಗಂಟೆ ಬಾರ್ಸಿ, ದೀಪ ಹಚ್ಚಿ, ಸಿದ್ದನ್ ಕಂಡೋರ್ ಎಷ್ಟ್ ಜನ ?

ಬಲ್ ನನ್ ಮಗ ಸಿದ್ದ ಅವ್ನು, ಯಾರ್ ಯಾರ್ಗ್ ಎಲ್ ಎಲ್ ಕಂಡ್ನೋ ?

ಬುಂಡೇನ್ ಬಾಯಾಗ್ ಬಸಿದ್ಕೊಂಡ್ ಬುಟ್ರೆ ನಂಗ್ ಅವ್ನ್ ಅಲ್ಲೇ ಕಂಡ್ನೋ



ಹೊರಗಿನ ಜನರಿಗೆ ತೋರಿಕೆಗಾಗಿ ಮಾಡುವ ಆಡಂಬರಗಳು, ನಮ್ಮ ಗಂಟೆಯನ್ನು ನಾವು ನಾಲ್ಕು ಜನರಿಗೆ ಕೇಳುವ ಹಾಗೆ

ಬಾರಿಸಿ ಮಾಡುವ ಪ್ರಚಾರದಿಂದ ಎಷ್ಟು ಜನಕ್ಕೆ ದೇವರು ಕಂಡಿದ್ದಾನೆ? ಅವನು ಯಾರ್ಯಾರಿಗೆ ಎಲ್ಲಿಲ್ಲಿ ಯಾವುದರಲ್ಲಿ ಕಂಡಿದ್ದಾನೋ ಯಾರಿಗೆ ಗೊತ್ತು.





---------------------------------------------------------------------------------------------



ಹೇಳ್ ಹೇಳು ಸುಳ್ಳೆಲ್ಲ ಸಂಜೆ ಯಾಗೋ ಗಂಟ

ಬಾಳ್ ರಾತ್ರಿ ಕೊನೆಯಲ್ಲಿ ಸುಳ್ ಹೇಳುವವರಿಲ್ಲ

ಸಂಜೆ, ಸಿದ್ದನಂಗಡಿ ಕದವು ತೆಗೆಯೋ ಗಂಟ ಸುಳ್ಳು

ಸಿದ್ದನ ಸಾರಾಯಿ ಹೀರಿದರೆ ನಿಜ ನಿಜವು ಎಲ್ಲಾ



ಒಂದು ಜನ್ಮವನ್ನು, ಒಂದು ದಿನವೆಂದು ನೋಡಿದರೆ, ನಮಗೆಲ್ಲ ಸಾಧಾರಣವಾಗಿ ಆಧ್ಯಾತ್ಮದ ಬಾಗಿಲು ತೆರೆದುಕೊಳ್ಳುವುದು ಜೀವನದ ಸಂಜೆಯಲ್ಲಿ.

ಸಂಜೆಯೆಂದರೆ, ನಮ್ಮ 'ವ್ಯವಹಾರ'ಗಳನ್ನೆಲ್ಲ ಮುಗಿಸಿ 'ಮನೆ'ಗೆ ಹೋಗಿ 'ವಿಶ್ರಾಂತಿ' ಪಡೆಯುವ ಸಮಯದಲ್ಲಿ. ಸಾಧಾರಣವಾಗಿ ಆ ಸಮಯದಲ್ಲಿ ನಮಗೆ ಸುಳ್ಳಿನ ಸಹಾಯ ಬೇಕಾಗುವುದಿಲ್ಲ. ಹಾಗಾಗಿ 'ಕುಡಿದವರು' ಸುಳ್ಳು ಹೇಳುವುದಿಲ್ಲ....

---------------------------------------------------------------------------------------------

No comments: