Monday, December 12, 2011

ಮಾರ್ತಾಂಡನ ಮೊಲೆಗೊಳಿಸಿ ಹಾಲ್ಗುಡಿಸು ಬಾ ತಾಯೆ

ಬ್ರಮ್ಹಾಂಡವನೇ ಕಲೆಸಿ ಬಾ ಉಣಿಸು ಬಾ ತಾಯೆ



ನನ್ನ ಖಂಡ ಖಂಡದಿ ನೀ ಅಖಂಡವಾಗಿ ಬಾ ತಾಯೆ

ಚಂಡದಿ ಚಂಡಿಯ ನಾ ಮುಡಿದೆ ಬಾ ತಾಯೆ



ನನ್ನ ಒಡಲಾಳದಿ ಕಡಲ ಮುತ್ತಾಗಿ ನೆಲೆಸು ಬಾ

ನಿನ್ನ ಮುಗಿಲ ಮಡಿಲೋಳು ಮಲಗೋ ಮನ ನಂದು ಬಾರೆ ಬಾ



ಅರಿವ ಅರಿವ ಕಣ್ಣಾಗಿ ಬಾರೆ ಬಾ

ಇರುಳ ಮರುಳನಳಿಸಾಕೆ ಬಾರೆ ಬಾ



ಬಸಿರಾಳದಲ್ಲೂ ಉಸಿರಾಳದಲ್ಲೂ ನಾ ನಿನ್ನೆ ನಂಬಿ ಕೊಂಡೆ

ಭ್ರಮ ಸರಿಸಿ ಬರುವ ಭ್ರಾಮರಿಯನಿಂದು ನಾನು ಕಂಡೆ ಕಂಡೆ

ಭವ ಕೆಸರಿನಿಂದ ಮೇಲೆದ್ದು ಬಂದು

ಓ ನನ್ನ ಅರಿವೇ ಅರಳು

ಮರುಳ ದೇಹದಲಿ ಅರಳಿ ನಿಂತು

ನೀ ಬೆಳಕಿನೆಡೆಗೆ ಮರಳು



ಮೂಲದಿಂದ ಆ ಯೋಗ ನಾಗವು

ಸರಿದು ಹರಿದು ಬರಲಿ

ಪಂಚಭೂತಗಳ ಹೆಡೆಯ ತೆರೆದು

ಅದು ಆರ ಮೀರಿ ನಿಲಲಿ



ಭವ ದಾಟಿ ಬಂದ ಅನುಭವವೇ ಅಂದ

ಅನುಭಾವವಾಗಿ ನಿಂದು

ಜಗವಾಳೋ ಭಗವತ್ ಶಕ್ತಿ ಅಂದು

ನಿಜ ಅರ್ಥದಲ್ಲಿ ಬಂದು



ನನ್ನ ದೇಹವಂದು ನಿಜ ಅರ್ಥದಲ್ಲಿ

ಪ್ರಾಣ ಪೂರ್ಣ ಯಂತ್ರ

ನಾ ಅರಿವೆ ಅಂದು ಗಜ ಗಾತ್ರದಲ್ಲಿ

ಪೂರ್ಣ ಪ್ರಾಣ ಮಂತ್ರ



ನನ್ನ ಮನವು ಇಂದು ಇದು ಯೋನಿ ನಿನಗೆ

ಬಾ ಬಾರೋ ದೇವ ಹುಟ್ಟಿ

ಆತ್ಮ ದೀಪ ಹೊಮಾಗ್ನಿಯಾಗಿ

ಬರುವನು ಸೂರ್ಯ ಹುಟ್ಟಿ



ನನಗಂದ ತಂದ ಅರವಿಂದನಿಂದ

ಈ ಬಾಳ ಗಂಧ ಚಂದ

ಬೆಳಕ ಸುರಿಸಿ ಮಜ್ಜನವಗೈದಳು

ಶ್ರೀಮಾತೆ ಕಣ್ಣಿನಿಂದ

ಏಕಾಂತದ ದ್ವೀಪ


ಕೆಲವು ದಿನಗಳ ಹಿಂದೆ, ನನ್ನ ಗೆಳೆಯ ರುದ್ರಪ್ಪನವರು ಏಕಾಂತದ ದ್ವೀಪದ ಬಗ್ಗೆ ಬರೆದಿದ್ದರು( ಕನ್ನಡ ಬ್ಲಾಗ್ನಲ್ಲಿ ಪ್ರಕಟಿಸಿದ್ದರು). ಅದನ್ನು ಓದಿ, ನಾನು, ನನ್ನ ಏಕಾಂತದ ದ್ವೀಪವನ್ನು ಹುಡುಕುತ್ತ ಹೊರಟಾಗ.......ಈ ಸಾಲುಗಳು ಮೂಡಿ ಬಂದವು.



ಈ ಕವಿತೆಯಲ್ಲಿ, ಒಂದೇ ಶಬ್ದ ಅಥವಾ ಸಾಲುಗಳಿಗೆ ಹಲವು ಅರ್ಥಗಳು ಬರುವ ಹಾಗೆ ರೂಪಿಸುವ ಒಂದು ಪ್ರಯತ್ನ ಮಾಡಿದ್ದೇನೆ. ಇಷ್ಟವಾದಲ್ಲಿ ತಿಳಿಸಿ. ಇಷ್ಟವಾಗದಲ್ಲಿ ಕಡ್ಡಾಯವಾಗಿ ತಿಳಿಸಿ.



ಅದು ನಂದು ದ್ವೀಪ, ಆನಂದ ದ್ವೀಪ

ನಂದದಾ ಒಂದು ದೀಪ

ಅದು ಇರುವುದಲ್ಲಿ, ಬೆಳಕಿರುವುದಲ್ಲಿ

ಅದುವೇ ನಂದಾ ದೀಪ



ನೀ ಹಾರು ಹಾರು, ನೀರ್ ಆಳವಿಲ್ಲ

ನಿನ್ನ ಭಕ್ತಿ ಗಾತ್ರಕಿಂತ

ಮುಳುಗಿಸುವುದಲ್ಲ, ಬೆಳಗಿಸುವ ಕಡಲಿದು

ಅವನಿರುವ ಸೂತ್ರವಂತ



ಅದು ಇರುವುದಲ್ಲಿ, ಮನ ಕಾಣುವಲ್ಲಿ

ಅದು ಇಲ್ಲ ಇಲ್ಲ ದೂರ

ಉಕ್ಕುವ ಉಲ್ಕಾ ಕಡಲಿದು ಬಂದು

ಕರೆಯುತಿಹುದು ಬಾರಾ



ಇದರಾಳವೇಷ್ಟು ಇದರುಪ್ಪು ಎಷ್ಟು

ತಿಳಿಯದೆ ನಿಂದೆ ಬಂದು

ಮಧು ಮಧುರವೆಂದು

ದೈವಾಧರದಿಂದ ವಾಣಿ ಒಂದು ಬಂದು



ಅದೋ ಕಂಡ ಕಂದ, ಆನಂದ ಕಂದ

ಶ್ರೀಮಾತಾರವಿದರಂದ

ಅದರಂದ ತಂದ ಬೆಳಕಿಂದ ಬಂದ

ನವಜಾತ ಬಂದು ನಿಂದಾ



ಶಬ್ಧಗಳ ವಿವಿದಾರ್ಥಗಳು:

ನಂದದಾ ಒಂದು ದೀಪ (೩ ಅರ್ಥ):

೧. ನಂದೂ ಅದ ಒಂದು ದೀಪ; ನಂದೂ ಒಂದು ದೀಪ ಇದೆ

೨. ನಂದು ಅದಾ ಒಂದು ದೀಪ; ನಂದು ಇದೇ ಒಂದು ದೀಪ

೩. ನಂದಿ ಹೋಗದಾ , ಆರಿ ಹೋಗದಾ ದೀಪ

ಇದನ್ನು ಓದಿದ ರುದ್ರಪ್ಪನವರು, ಹೀಗೆ ಹೇಳಿದರು:

ಇದು ೩ ಅರ್ಥ ಅಲ್ಲ. ಇದು ಜಾಗೃತಿಯ ೩ ಘಟ್ಟಗಳು.

ಘಟ್ಟ ೧. ಹುಟ್ಟಿದಮೇಲೆ, ನನಗೂ ಒಂದು ದೀಪ ಇದೆ ಅನ್ನುವ ಅರಿವು

ಘಟ್ಟ ೨. ನಂದು ಅದೇ ಒಂದು ದೀಪ ಅಂತ ಗುರುತು ಹಿಡಿವ ಅರಿವು

ಘಟ್ಟ ೩. ನನ್ನದು ನಂದದಾ ದೀಪ ಅನ್ನುವ ಅರಿವು.

ಇಷ್ಟು ಸೂಕ್ತ ವಾಗಿ ವಿಶ್ಲೇಷಣೆ ಮಾಡಿದ ರುದ್ರಪ್ಪನವರಿಗೆ ನನ್ನ ಧನ್ಯವಾದಗಳು.



ಅವನಿರುವ ಸೂತ್ರವಂತ (೨ ಅರ್ಥ):

೧. ನಮ್ಮೆಲ್ಲಾರ ಸೂತ್ರ ಹಿಡಿದು ಕೊಂಡಿರುವವನು

೨. ನಾನು ಮುಳುಗಿದರೆ ಎತ್ತಲು ಸೂತ್ರ ಹಿಡಿದು ಕಾಯುತ್ತಿರುವವನು



ಮನ ಕಾಣುವಲ್ಲಿ(೨ ಅರ್ಥ):

೧. ಮನಸ್ಸಿಗೆ ಕಾಣಿಸುವಲ್ಲಿ

೨. ಮನಸ್ಸು (ನನ್ನ ನಿಜವಾದ ರೂಪ) ಕಾಣುವಲ್ಲಿ



ತಿಳಿಯದೆ ನಿಂದೆ ಬಂದು(೩ ಅರ್ಥ):

೧. ತಿಳಿಯದೇ ನಿಂದೆ ಮಾಡುವುದು

೨. ತಿಳಿಯದೇ ನಿಂತುಕೊಂಡೆ



ಶ್ರೀಮಾತಾರವಿದರಂದ(೨ ಅರ್ಥ): ಗುರು ನಮನ

ಶ್ರೀಮಾತಾ ಮತ್ತು ಶ್ರೀ ಆರೋಬಿಂದರ ಅಂದ

ಶ್ರೀಮಾತಾ + ಶ್ರೀ ಆರೋಬಿಂದೋ + ಅಂದ (ಅಂ ದ : ಅಂಬಿಕಾತನಯದತ್ತ)

Sunday, December 11, 2011

ಪಾರಿಜಾತ

ಉರುಳುರುಳುತ್ತಿರೋ ಮರುಳಿರುಳಲ್ಲಿ

ಕರುಳರಳುತ್ತಿದೆ ಕಾಣಲ್ಲಿ

ನರುಳರಳುತ್ತಿರೋ ಮನಸುಗಳಲ್ಲಿ

ತಿರುಳರಳುತ್ತಿದೆ ತಿಳಿಯಲ್ಲಿ



ಮಳೆ ತೊಳೆದು ಕೊಳೆ ಕಳೆದು

ನಿಂತಿರುವ ದೇಹವಿದು

ಹರ ಹರಿದು, ಕಳೆ ಕರೆದು

ಬರುತಿರುವ ಮನಸು



ನರ ನರರ ನರ ನಾಡಿ-

-ಗಳ ಒಳಗೆ ಹೊಕ್ಕಿರುವ

ನರಳಾಡೋ ಇರುಳಲ್ಲೇ ಅರಳುತಿಹುದು

ಮರುಳಾಳದಲ್ಲಿಯೇ ಅರಳುತಿಹುದು



ಕರಿ ಕರಿಯ ಇರುಳಲ್ಲಿ

ಪರಿ ಪರಿಯ ಪಾರಿಜಾತ

ಅಂಜದೆ ಅಳುಕದೆ ಅರಳುತಿಹುದು

ತನ್ನ ಕಂಪಿಂದ ಕಂಪಿಸಿ ಇರುಳನ್ನು, ಮರುಳನ್ನು

ಬೆಳಕಿನಾ ಊರಿಗೆ ಕರೆಯುತಿಹುದು

ಕಾಳಿಕಾನುಭವ

ಕರಿ ಇರುಳ ನೆರಳಲ್ಲಿ

ಭವದಿರುಳ ಮರುಳಲ್ಲಿ

ಬೆಳ್ಳಿ ಬಾನಿಗೆ ಬಾಳು ಕಾಯುತಿಹುದು

ಬರುವ ಬೆಳಕನು ನೆನೆಸಿ ನಲಿಯುತಿಹುದು



ಒಡಲ ಬಸಿರಲ್ಲಿ

ಹಳೆಯ ಕೆಸರಲ್ಲಿ

ಬರಿ ಗಾಳಿ ಬಿರುಗಾಳಿ ಆಗುತಿಹುದು

ಬರೋ ಗಾಳಿ ನಾ ಕಾಳಿ ಎನ್ನುತಿಹುದು



ತಾಯಿಯ ರಕ್ತಾಕ್ಷಿ-

-ಯಲಿ ನನ್ನ ಭಕ್ತಾಕ್ಷಿ

ಬೆಳಕ ಕಂಡು ಕಣ್ಣು ತುಂಬುತಿಹುದು

ಕಣ್ ತುಂಬ ತಾಯನ್ನೇ ತುಂಬುತಿಹುದು



ಕಾಳಿಯಾ ಕಣ್ಣಲ್ಲಿ

ಕಂಡೆನಾ ಬೆಳಕಲ್ಲಿ

ಹಾವೊಂದು ಒಳಗೆಲ್ಲೋ ಹರಿಯುತಿಹುದು

ಹೂ ತನ್ನ ದಳವೆಲ್ಲ ತೆರೆಯುತಿಹುದು

Thursday, November 10, 2011

ಭಾವ: "ಲಿಂಗೈಕ್ಯ " ವಾಗಲು ಜೀವ ತೊರೆಯುವ ಅಗತ್ಯವಿಲ್ಲ. ನಾನು ಬಾಳು ಬಾಳುವ ರೀತಿಯೇ ಸಾಕ್ಷಾತ್ಕಾರಕ್ಕೆ ದಾರಿ.




ಕವಿತೆಯಲ್ಲಿ ಶಿವನು ಹಲವು ರೂಪಗಳಲ್ಲಿ ಬರುತ್ತಿದ್ದಾನೆ. ಯಾಕೆಂದರೆ, ಶಿವನು ನಮಗೆ, ಸಂಸಾರದಲ್ಲೂ ಹಾಗೂ ಸ್ಮಶಾನದಲ್ಲೂ, ಈ ಎರಡೂ ಕಡೆಯೂ ನಮಗೆ ಅಧ್ಯಾತ್ಮದ ಪಾಠ ಕಲಿಸುವ ಏಕೈಕ ದೇವರು.

ಅವನು ಹೆಂಡತಿ ಮಕ್ಕಳು ಜೋತೆಗಿದ್ದಾಗಲೂ ಹಾಗೂ ಸ್ಮಶಾನದಲ್ಲಿ ಬೈರಾಗಿ ಆದಾಗಲೂ ಅಧ್ಯಾತ್ಮವನ್ನು ಹೇಗೆ ನಿಭಾಯಿಸಬೇಕು ಅಂತ ಹೇಳಿ ಕೊಟ್ಟಿದ್ದಾನೆ.



ಈ ಕವಿತೆಯಲ್ಲಿ ಕೂಡ ಕೆಲವು ವಾಕ್ಯಗಳಿಗೆ ಹಲವು ಅರ್ಥಗಳು ಇರುವ ಹಾಗೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿವಿಧಾರ್ಥಗಳನ್ನು ಕವಿತೆಯ ಕೆಳಗೆ ವಿವರಿಸಿದ್ದೇನೆ.





ಬಾರೋ ಬಾಳೇ ಪರಾಕು ನಿನಗೆ

ಹಾಳಾದರೆ ಬರಿ ಹಾಳೇ ನಿನಗೆ



ಮಂದ ದೇಹದಲಿ, ಅಂಧ ಹೃದಯವಿದು

ಚಂದ ಚಂದ ಮನವು

ಸಂದ ಕಡಲಿನಲಿ, ಮಿಂದ ಮನಕೆ

ಪ್ರಜ್ಞ್ಯಾ ಪ್ರಸಾದ ನಿಜವು



ಓ ನನ್ನ ಶಿವನೆ, ಬಾ ಎಂದು ಒಡನೆ

ಬರಬೇಕು ಬೇಕು ನೀನು

ನಾ ನಿನ್ನ ನೋಡಲು, ನಿನ್ನ ಸೇರಲು

ಜವನ ದಾಟಬೇಕೆನು?



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ

ಇದು ನನ್ನ ಪಕ್ಷಿ, ಇದು ನನ್ನ ಅಕ್ಷಿ

ಹಾರೀತೋ ಬಾಳಿ ಬಾಳಿ



ನನ್ನ ಚಿತ್ತವು ಚಿತ್ರಿಸೋ ಚಿತ್ರವೂ ನೀನು

ಬಾಳೆಂಬುದಕೆ ಅರ್ಥವೂ ನೀನು

ಜೊಂಪನು ಕಂಪಿಸೋ ರುದ್ರನು ನೀನು

ಬಾಳು ಬೆಳಗಲು ಭದ್ರನು ನೀನು





ಹಾಳಾದರೆ ಬರಿ ಹಾಳೇ ನಿನಗೆ (೨ ಅರ್ಥ):

೧. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ, ನೀನೂ, ನಿನ್ನ ಘನತೆಯೂ ಹಾಳಾದಂತೆ.

೨. ಇಷ್ಟು ಶುದ್ಧವಾದ ಬಾಳು ನಡೆಸಿದ ನಾನು ಹಾಳಾದರೆ. ನನ್ನ ಬಾಳು ಖಾಲಿ ಹಾಳೆಯಂತೆ. ಅದನ್ನು ತುಂಬಿಸುವ ಎಲ್ಲ ಜವಾಬ್ದಾರಿಯೂ ನಿನ್ನದೇ.ಶರಣಾಗತಿ ಭಾವ.



ಇದು ಪ್ರಾಣ ಪಕ್ಷಿ, ಅದರಕ್ಷಿ ಬಿಚ್ಚಿ

ಹಾರೀತೋ ಬಾರಿ ಬಾರಿ (೨ ಅರ್ಥ):

೧. ಪ್ರಾಣ ಪಕ್ಷಿ ಹಾರಿಹೋಗಿ, ಜೀವ ಹೊರಟು ಹೋಗಿ. ಅದು ಲಿಂಗೈಕ್ಯ ವಾಗುವುದು.

೨. ಧ್ಯಾನ ಮಾಡುವಾಗ, ಪ್ರಾಣ/ಉಸಿರಿನ ಮೇಲೆ ಗಮನ ಇಟ್ಟುಕೊಂಡಾಗ. ಪ್ರಾಣ ರೂಪಿಯಾದ ಪಕ್ಷಿ, ನಮ್ಮ ದೇಹದ ಹೊರಗೂ ಒಳಗೂ ಹಾರುತ್ತಿರುವಾಗ ಆಗುವ ಜ್ಞಾನೋದಯ ಕೂಡ ಲಿಂಗೈಕ್ಯಾನುಭೂತಿಯೇ ಸರಿ.



ಬಾಳು ಬೆಳಗಲು ಭದ್ರನು ನೀನು (೨ ಅರ್ಥ):

೧. ನನ್ನ ಬಾಳು ಬೆಳಗಲು, ಹೇ ಶಿವನೆ ನೀನೆ ಬೇಕು.

೨. ನನ್ನ ಬಾಳು ಬೆಳಗಿದರೆ, ನಿನ್ನ ಘನತೆಯೂ ಭದ್ರ.





ಕರೆ ಕಲ್ಲ ನೀನು ಕೈಯಾಗ ಹಿಡಿದು, ಲಿಂಗಂತಿಯಲ್ಲೋ ಖೋಡಿ


ಖರೆ ಹೇಳು ನೀನು ತಿಳಿದೀಯೇನು ಇದರಾಗ ಇರೋ ಮೋಡಿ



ಭಕ್ತಿ ಉಂಡ ಕರೆ ಕಲ್ಲು ಕೂಡ ಲಿಂಗಾಗತೈತಿ ಅಣ್ಣಾ

ಬರೆ ಬೆವರನುಂಡು ಅದು ಬೆಂಡು ಬೆಂಡು, ನಾರತೈತಿ ಹುಣ್ಣಾ



ಓಲ್ಯಾಡಬೇಕು, ತೂರ್ಯಾಡಬೇಕು, ಲಿಂಗಕ್ಕ ಮತ್ತು ಬಂದು

ಎದೆಗೂಡಿನಾಗ ಉಕ್ಕಿ-ಸೂಸೋ ಭಕ್ತಿ ರಸವನುಂಡು



ನಿನ್ನ ಮನಸಿನ್ಯಾಗ ಆ ಭಕ್ತಿ ಇದ್ದು, ನಿನ್ನ ಕನಸಿನ್ಯಾಗ ಆ ಶಕ್ತಿ ಇದ್ದು, ನೀ ಮಸೆದು ಬಿಡು ಅದನಾ

ಅದೋ ಬಂದ ಬೂದಿ ಭಂಡಾರ ಬಳಿದು ನೀ ಆಗಿಬಿಡು ಶಿವನಾ

ಅಂಗಾರ ಉಟುಕೊಂಡು, ಹ್ಯಾಂಗಾರ ಕೂತಾಳು


ಮುಂಗಾರಿಗಾಗೀಯೇ ಕಾದಾಳೋ



ತವರಿಂದ ಬರತೈತಿ, ಜಳಕಾವ ಏರಿತೈತಿ

ಎಳಕಲ್ಲು ಹಸಿರು ಉಡೆ, ಉಡಿ ತುಮ್ಬತೈತಿ



ಅಂಬರದಾಗ ಅಭಂಗ ಗಾನ

ಹಾಡುತ ಬಂತು ಮೋಡವು ನಾ ನಾ



ಅಂಗಳದಾಗ ಮಂಗಳ ಮೂಡಿ

ತಿಂಗಳ ಕಂಗಳ ಬಂಡಿಯು ಕಂಡಿ



ಮಿಂಚಿನಾ ಅಂಚು, ಸೀರೆಗೆ ಕಾಣಾ

ವಜ್ರಾಯುಧವಾ ಹೊಲಿದೆ ಏನಾ?



ತಾಯಿಯ ತವರಿನ ಸೊಬಗನು ನೋಡಾ

ನವಿಲಿನ ಹಾಂಗಾ ನೀನೂ ಆಡಾ



ಮೋಡದಾಗಾ ಮ್ಯಾಳಾ ಮಾಡಿ

ಮಿಂಚಿನಾಗಾ ಬೆಳಕಾ ಮೂಡಿ



ಉಡಿಯಾಗ ಕಟ್ಟಾಳೋ ಎಲೆ ಅಕ್ಕಿ ಹಣ್ಣಾಕಿ

ಉಣ್ಣಾಕ ಕಾಯಿತಾವ ಮರಿ ಆಕಿ ಹಡೆದಾಕಿ

ಗುರು ನಮನ

ಮಣ್ಣಿನಾ ಕಣ್ಣಾಗ ಕಳೆಯನ್ನು ತುಂಬಿದಾ ಗುರುವೇ ನಿನಗ ಶರಣು

ದೇಹದಾ ಕಣಕಕ್ಕ ಹೂರಣಾ ತುಂಬೀದ ಬೆಳಕೇ ನಿನಗೂ ಶರಣು



ಚಿಗುರೀಗ ಒಡೆದೈತಿ, ಮರವಾಗಿ ಬೆಳಿತೈತಿ, ಇರಲು ನಿನ್ನ ಕರುಣಾ

ಭವ ದಾಟಿ, ಜವ ದಾಟಿ, ನಾ ಬರುವ ಈ ಧಾಟಿಗಿಲ್ಲ ಇನ್ನು ಮರಣಾ



ಆಂತರ್ಯಕೆ ಅಮೃತದಂದಾ ತಂದಾ ತಂದೆಗಿಲ್ಲ ಆಡಂಬರಾ

ಅಮೃತಧಾರೆಯ ಹಿಡಿದು, ಅಂತಃಪುರಕೆ ಬಾ ಅಂದೆಯಾ ಔದುಂಬರಾ ?



ನನ್ನೊಳಗಿನೊಳಗೆ ನೀ ಬೆಳಗು ಬೆಳಕೇ, ಓ ಗುರುವೇ ನೀನು ಬಂದು

ನಿನ್ನ ಚರಣದರುಣದಲಿ ಇರುವ ಬೆಳಕು, ಕರುಣೆಯಾಗಿ ನನ್ನ ಮಿಂದು



Wednesday, August 17, 2011

ಉತ್ತಿಷ್ಠ ಭಾರತಿ

ಉತ್ತಿಷ್ಠ  ಭಾರತಿ, ಜಗತ್ ಸಾರಥಿ
ದೀಪ ನಾಡು ನೀ, ಜೀವ ನಾಡಿ ನೀ
ತೋರು ದಾರಿ ನೀ, ಜಗತ್ ಪಾಲಿನಿ
'ವಸುದೈವ ಕುಟುಂಬಕಂ' ಎಂದು ಸಾರು ನೀ
ಉತ್ತಿಷ್ಠ  ಭಾರತಿ, ಜಗತ್ ಸಾರಥಿ

ಹೇ ಮಾತೆ ನೀ, ಜಗನ್ ಮಾತೆ ನೀ
ಕೈ ಹಿಡಿದು, ಮನ ತೊಳೆದು
ನೆಡೆಸು ಭಾಗವತ್ ಜಾತೆ ನೀ
ದಾರಿ ತೋರು, ಇಂದು ನೀ
ಅಂದು ಇಂದು ಎಂದೂ ನೀ
ಬೆಳಕ ತೋರೋ ಮಾತೆ ನೀ

ನೀನೇ ಕಾರಣನೀನೇ ಹೂರಣ
ನೀನೇ ಪೂರಣ ಪೂರಣ
ಜಗತ್ ಭ್ರಮೆಗೆ, ಮಹತ್ ಭ್ರಮೆಗೆ
ನೀನೇ ಶಾಶ್ವತ ಮಾರಣ
ಅರಿವಿಗೆ ನೀನೇ ಕಾರಣ
ನಮ್ಮ ಚೇತನ ನಿನ್ನಲೇ ಧಾರಣ

ಹುಟ್ಟುತಿದೆ ಹೊಸ ದೇಶ ಒಂದು

ಶ್ರೀ ಅರವಿಂದರು ಭಾರತದ ಸ್ವಾತಂತ್ರದ ಸಮಯದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳನ್ನು ಓದುತ್ತ ಇರುವಾಗ, ಭಾರತ ತನ್ನ ಸ್ವಾತಂತ್ರ್ಯಕ್ಕೆ ಮತ್ತೆ ಹೋರಾಡುವುದಕ್ಕೆ ಸಜ್ಜಾಗುತ್ತಿರುವ ಈ ಸಮಯದಲ್ಲಿ  ಆ ಅನಿಸಿಕೆಗಳು ಇಂದೂ ಕೂಡ ಅಷ್ಟೇ ಸಮಂಜಸವಾಗಿ ಕಂಡವು.




ಹುಟ್ಟುತಿದೆ ಹೊಸ ದೇಶ ಒಂದು

ಜಗತ್ ಮಣ್ಣ ಕಣ್ಣ ಮುಂದು

ನುರಿತ ಕಣ್ಣಿಗೆ ಕಂಡಿತಿಂದು

ಭ್ರಷ್ಟ ಭೂತದ ಬೂದಿ ತಿಂದು



ಹೊಸದಲ್ಲ ಇದು ಈ ದೇಶಕೆ ಇಂದು

ಇದ ಮಾಡಿದೇವು ನಾವು ಎಂದೂ ಎಂದೂ

ಇದು ಬಗ್ಗಿದಿಲ್ಲ , ಇದು ಬಾಗುದಿಲ್ಲ

ನುಗ್ಗಿ ನಡೆ ನೀ, ಸಾಗುದೆಲ್ಲ



ಹಲವು ಪಾತ್ರ ಇದು ಒಂದೇ ಸೂತ್ರ

ಧರ್ಮಕ್ಕೆ ಭಾರತವೇ ಅಕ್ಷಯ ಪಾತ್ರ

ನಿನ್ನ ಹಿಂದೆ ತಿಳಿದು, ನೀ ಮುಂದೆ ನಡೆದು

ಭವ್ಯ ಭಾರತದ ಕನಸ ಹಿಡಿದು, ಹಡೆದು



ಇದು ಬುದ್ಧ-ಯುದ್ಧದ ಶುದ್ಧ ಭೂಮಿ

ಇದ ತಿಳಿಯುವವರು ಇಲ್ಲಿ ಹುಟ್ಟಿದರು ಸ್ವಾಮಿ

'ದಾನ-ಮಾನ' ಜ್ಞಾನದ ಧ್ಯಾನ ಮಂದಿರ

ಎದ್ದು ನಿಲ್ಲುವುದು ಎತ್ತರೆತ್ತರ



ಜಗಕೆ ಎಂದು ಎಂದಿಗೂ ಸೂಚಿ ಸೂಜಿ ನೀ

ನಿಲ್ಲದಿರಲಿ ಇದು ಎಂದು ಅಂದೇ ನೀ

ನನ್ನದಲ್ಲ ಇದು ಯುಧ್ಹ ನಿನ್ನದು

ಬರುವ ಪೀಳಿಗೆಗೆ ದೇಶ ಶುದ್ಧ ಮಾಡಲೆಂದು



* ಜಗತ್ ಮಣ್ಣು: ಭಾರತ, ಮಾತೃ ಭೂಮಿ. ಭಾರತ ಅಲ್ಲದ ಭೂ ಭಾಗ ಮಣ್ಣು ಮಾತ್ರ.

(ಭಾರತೀಯ ಸಂಸ್ಕೃತಿ ಹಾಗು ಅದರ ಮೇಲೆ ಆದ ದಾಳಿಗಳನ್ನು ತಿಳಿದವರಿಗೆ.ಹಾಗು ಭಾರತ ಅದೆಲ್ಲವನ್ನು ತಾಳಿ ಎದ್ದು ನಿಂತ ರೀತಿ ಅರಿತವರಿಗೆ,

ಭಾರತ ಅಲ್ಲದ ಭೂ ಭಾಗ ಬರೀ ಮಣ್ಣು ಅಂತ ಅನಿಸುತ್ತದೆ)

ಬಗ್ಗಿದಿಲ್ಲ , ಬಾಗುದಿಲ್ಲ: ಹಿಂದೆ ಕೂಡ ಬಗ್ಗಲಿಲ್ಲ, ಮುಂದೆ ಕೂಡ ಬಾಗೋದಿಲ್ಲ

ಹಿಂದೆ ತಿಳಿದು,  ಮುಂದೆ ನಡೆದು: ಭಾರತದ ಇತಿಹಾಸವನ್ನು ತಿಳಿದರೆ ಮಾತ್ರ, ಭಾರತದ ಭವಿಷ್ಯ ರೂಪಿಸಲು ಸಾಧ್ಯ

ಬುದ್ಧ-ಯುದ್ಧದ ಶುದ್ಧ ಭೂಮಿ: ಈ ಭೂಮಿಯ ಶುದ್ಧಿಕರಣಕ್ಕೆ ಯುದ್ಧ ಹಾಗು ಬುದ್ಧ (ಬುದ್ಧನ ತತ್ತ್ವ) ಎರಡನ್ನೂ  ಸಮಾನ ಗೌರವದಿಂದ ಬಳಸಿಕೊಂಡಿದ್ದಾರೆ

'ದಾನ-ಮಾನ' ಜ್ಞಾನ: ದಾನ ಮಾಡಿದವನೇ ಮಾನವಂತ ಎಂಬ ಜ್ಞಾನ (ಭ್ರಷ್ಟನು ಮಾನ ಹೀನ ಎಂಬ ಜ್ಞಾನ)
* ಸೂಚಿ ಸೂಜಿ: ಜಗಕ್ಕೆ ದಿಕ್ಕು ತೋರುವ ದಿಕ್ಸೂಚಿಯ ಸೂಜಿ

Tuesday, July 26, 2011

ಓ ಮಂಗಳ ಆರತಿಯೇ


ಓ ಮಂಗಳ ಆರತಿಯೇ

ಕುಣಿ ಕುಣಿದು ನೀನು ಹಾರುತಿಹೆ

ಯಾವ ತತ್ತ್ವವನು ಸಾರುತಿಹೆ

ಓ ಮಂಗಳ ಆರತಿಯೇ



ಓ ಮಂಗಳ ಆರತಿಯೇ

ನಿನ್ನ ಶಾಖವನು ಕಣ್ಣಿಗೆ ಒತ್ತಲು  

ಮನ ಜಡ ನಿದ್ದೆಯು ಕರಗುತಿದೆ

ನಿನ್ನ ಶಾಖವನು ಎದೆಗೆ ಒತ್ತಲು

ತನುವಿದು ನನ್ನದು ನಲಿಯುತಿದೆ

ಓ ಮಂಗಳ ಆರತಿಯೇ



ಓ ಮಂಗಳ ಆರತಿಯೇ

ಸೂರ್ಯನ ರೂಪದಿ ಕಾಣುತಿಹೆ

ಪ್ರಕೃತಿ ಮಾಡಿದ ಸುಕ್ರುತಿಗೊಂದು

ಭೂ ಮಾತೆಗೆ ಕಡಲುಗಳಿಗೆ ಒಂದು

ನಿತ್ಯ ಆರತಿ ಮಾಡುತಿಹೆ

ಓ ಮಂಗಳ ಆರತಿಯೇ



ಓ ಮಂಗಳ ಆರತಿಯೇ

ಭಾರತ ಮಾತೆ ನನ್ನವಳೆಂಬ

ಕಿಚ್ಚದೂ ಒಂದು ಆರತಿಯೇ

ದಿನ ದಿನ ಎದ್ದು, ಕ್ಷಣ ಕ್ಷಣ

ನಿನಗೆ ಮಾಡುವೆ ನಾನು ಆರತಿಯೇ

ಓ ಮಂಗಳ ಆರತಿಯೇ



ಓ ಮಂಗಳ ಆರತಿಯೇ

ಚೇತನ ರೂಪದಿ ಕಾಣುತಿಹೆ

ಉರಿ ಉರಿ ನೀನು ಆರತಿಯೇ

ನೀನೇ ನನಗೆ ಸಾರಥಿಯೇ

ಓ ಮಂಗಳ ಆರತಿಯೇ

ಗರ್ಭಗುಡಿಯ ದೀಪ

ಗರ್ಭಗುಡಿಯ ಓ ದೀಪವೆ ನಿನಗೆ

ಕಿವಿಮಾತೊಂದಾ ಕೇಳುವೆ

ನಿಜವನೆ ನೀನು ಹೇಳಬೇಕು

ಎಂದು ನಾನು ಬೇಡುವೆ



ಶಿವಪ್ಪನ ಗುಡಿಯಲಿ, ಅವನ ಬಗಲಲಿ

ನೀನು ಎಂದೂ ಕೂರುವೆ

ನಮ್ಮ ಬಸಪ್ಪನೇ ಹೊರಗೆ ಕೂತಿರಲು,

ನೀನು ಒಳಗೆ ಹೇಗೆ ಹೋಗುವೆ

ಇಷ್ಟು ಸನಿಹಕೆ ಅವನಿಗೆ ನೀನು ಹೋಗಲು ಏನು ಮಾಡಿದೆ?

ಹೋದ ಜನ್ಮದಲಿ ಯಾವ ಪುಣ್ಯವ ಮಾಡಿ ಹೀಗೆ ಆಗಿದೆ?



ನಾರಾಯಣಪ್ಪನಾ ಗುಡಿಯಲಿ ಹೋದರೆ

ಅಲ್ಲೂ ನೀನೇ ಕಾಣುವೆ

ಕಾಲಲ್ಲಿ ಕೂತಿರಲು ಲಕ್ಷ್ಮವ್ವ

ನೀನು ತೆಲೆಯ ಬದಿಯಲಿ ಕೂರುವೆ

ನೀನು ಹೀಗೆ ಆಗಲು, ಏನು ಏನು ಮಾಡಿದೆ

ನನಗೆ ಅದನು ಹೇಳಲೂ, ನಿನ್ನ ಗಂಟು ಕಳೆದು ಹೂಗುದೆ?



ಅಮ್ಮನ ಗುಡಿಯಲಿ ಅಮ್ಮನ ಮೇಲೇ

ಬೆಳಕನು ನೀನು ಚೆಲ್ಲುವೆ

ಆಕೆಯ ಜರತಾರಿಯ ಜರಿಗಳಿಗೆ

ಮೆರಗನು  ನೀನು ನೀಡುವೆ

ದೀಪವೆ ನೀನು ಬೆಳಕಾಗಲು, ಯಾವ ತಪವನು ಮಾಡಿದೆ?

ಅಮ್ಮನ ಮೇಲೇ ಬೆಳಕು ಚೆಲ್ಲಲು, ಯಾರ ಕರುಣೆ ಕೋರಿದೆ?



ಮಗುವನು ಹೊತ್ತು  ನಿಂತಿರೋ ತಾಯಿಯ

ಮೊಗದಲಿ ಮಿಂಚನು ಮುಡಿಸುವೆ

ಆ ಗರ್ಭ-ಗುಡಿಯಲೂ ನೀನೇ ಇರುವುದು

ಎಂದು ನಾನು ಹೇಳುವೆ

ಒಳಗೆ ಹೊತ್ತಿರುವ ದೀಪದ ಬೆಳಕು ಆಕೆ ಕಣ್ಣಲಿ ಕಾಣಲು

ಗರ್ಭಗುಡಿಯೋಳು ಕೂತಿರೋ ದೇವಗೆ ಅಲ್ಲವೇ ಆಕೆ ಸಮಾನಳು?



ನಿನ್ನ ಎಷ್ಟು ನೋಡಿದರೂ, ಎಷ್ಟು ನಿನ್ನ ಕೇಳಿದರೂ

ನೀನು ಯಾರು ಎಂಬುದೇ ತಿಳಿಯದು

ನೀ ಗುಡಿಯ ಗರ್ಭದಲಿ ಕೂರುವವನಾ?

ಗರ್ಭದ ಗುಡಿಯಲಿ ನೆಲೆಸುವವನಾ, ಎಂದು ಅರಿಯದು

ಇನ್ನೂ ನನಗೆ ಅರಿಯದು, ಎಂದು ನನಗೆ ಅರಿವುದು?

Monday, July 25, 2011

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

ನೀ ಇಲ್ಲದಿರಲು ನಾ ಬೆಳೆದೆನೇನು?

ಬೆಳೆದರೂ ಹಾಗೆ ಅದರರ್ಥಯೇನು?



ಒಡಲಲ್ಲಿ ಬಚ್ಚಿ ನನ್ನ ಕಾದು ಕಾದು

ಕೆನ್ನೀರ ಸತ್ತ್ವವನು ಹೀರಿ ಬೆಳೆದು

ನನ್ನ ತೀಡಿ ತೊಳೆದು ಅಲ್ಲಿ ರೂಪ ನೀಡಿ

ಈ ಚೇತನಕ್ಕೆ ಒಂದು ಮನೆಯ ಮಾಡಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ಉಣಿಸುವೆ ಹಾಲು, ದೇಹಕೆ ನೀನು

ಮನಕೆ ಉಣಿಸುವೆ ಪ್ರೇಮದ ಜೇನು

ಧೈರ್ಯವ ಉಣಿಸಿ ಜೋಗುಳದಲ್ಲಿ

ಆದರ್ಶವ ಉಣಿಸಿ ತುತ್ತುಗಳಲ್ಲಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ಮನವನು ಮಣಿಸುವ ದಾರಿಯ ಹೆಣೆಸಿ

ಅದರಲ್ಲಿ ನಡೆಯಬೇಕೆಂದು ಕಲಿಸಿ

ನಾ ಸೋತರೆ ಏನು, ಈ ಜಗದಲಿ ಇಂದು

ನಿನ್ನ ತೊಡೆಯೇ ನನಗೆ ಇದು ಊರ್ಜೆ ಬಿಂದು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ನಾ ನಿನ್ನ ತೊರೆದು, ನೀ ನನ್ನ ತೊರೆದು

ಹೋದೆವೆಂದರೂ ಹೋದೆವೆಂದು?

ಜಗದಾಟವಾಡಿ ನಾ ಮಲಿನವಾಗಿ

ಭೂ ನಲ್ಲಿ ಮಲಗಿ ನಾ ವಿಲೀನವಾಗಿ

ನಾ ಮತ್ತೆ ಮತ್ತೆ ಮತ್ತೆ ಶುಭ್ರವಾಗಲು

ಬಂದು ಸೇರುವೆ ನಿನ್ನ ಒಡಲೋಳು

Wednesday, July 6, 2011

ದಿವ್ಯ ನಿದ್ರೆ.....



Awakening is the process of getting into a state of Divine Sleep/Trans. In that Divine Sleep, you will be able to see a dream and what you see and experience in that dream is what awakens you.



ಓ ದಿವ್ಯ ಮಗುವೆ

ನೀ ಮಾಡುತಿರುವೆ

ಅದುವೇ ದಿವ್ಯ ನಿದ್ರೆ

ದಿವ್ಯ ನಿದ್ರೆಯಾ

ದಿವ್ಯ ಕನಸಿನಲಿ

ನವ್ಯ ಬಾಳ ಮುದ್ರೆ



ಉಸಿರಾಡು ಆಡು ನಿನ್ನ ಉಸಿರಿನಲ್ಲಿ

ಓಂಕಾರ ಗುನುಗುತಿಹುದು

ಈ ದಿವ್ಯ ನಿದ್ರೆ ನಿನಗೆ ಎಂದೆಂದೂ ಇರಲಿ

ಇದುವೇ ದಿವ್ಯ ಮದಿರೆ



ನೀ ಸುಪ್ತನಲ್ಲ, ನೀ ಮುಕ್ತನಿಂದು

ಬೆಳಕಿನಾ ತೊಟ್ಟಿಲಲ್ಲಿ

ಅದು ತೂಗಿದೆಷ್ಟು, ನೀ ಮಲಗಿದಷ್ಟು

ನೀ ಎಚ್ಚರ-ಎಚ್ಚರ ಅಲ್ಲಿ



ಇದು ನಿನ್ನ ಬಾಳು, ಇದು ನಿನ್ನ ಯೋಗ

ಇದು ಯೋಗ ಮಾತ್ರ ವಿರಲಿ

ನಿನ್ನ ಚಿತ್ತ-ಚೇತನದ ಸುತ್ತು ಸುತ್ತಲೂ

ಭೋಗ ಸುಳಿಯದಿರಲಿ



ಆ ಬಾಳು ನೀನು ಬಾಳಿದರೆ-

ಆಗ, ಆ ಬಾಳು ಪೂರ್ಣ ಯೋಗ

ಆ ಪೂರ್ಣ ಯೋಗದ ಪೂರ್ಣಾಹುತಿಯು

ಆಗ ಅವಗೆ ಯೋಗ್ಯ.....

Friday, July 1, 2011

ಬಾರೋ ಬಾರೋ ಶಿಶಿರ ವಸಂತ


ಬಾರೋ ಬಾರೋ ಶಿಶಿರ ವಸಂತ

ಬಾಳಿಗೆ ಬಣ್ಣವ ಬಳಿಯುವ ಸಂತ

ಬಣ್ಣದ ಆಟದ ಪರಿ ಇದು ಎಂಥ

ಬಾರೋ ಬಾರೋ ಶಿಶಿರ ವಸಂತ


ಹೂವುಗಳ ಹಾಗೇ ಅರಳಿರು ಅಂತ

ಅರಳಿಸಿ ಮಧುವನು ಹಂಚುತ ನಿಂತ

ಮಧುವನು ಹಂಚಿ ನಗುತಿರು ಅಂತ

ಜೀವನ ಪಾಠವ ಕಲಿಸುವ ಸಂತ

ಇಂತಹ ಕಲೆಯು ನಿನಗೇ ಸ್ವಂತ

ಬಾರೋ ಬಾರೋ ಶಿಶಿರ ವಸಂತ


ಅಲ್ಲಿ ಅವನ ಬಿಳಿ ಮಾಡಿ, ಮತ್ತವನ ಕರಿ ಮಾಡಿ

ಹಳದಿ ಮತ್ತಿವನ ಮಾಡಿದ ನಿನ್ನ ಕಲೆ ಎಂಥ

ಎಲ್ಲರಲ್ಲೂ ತುಂಬಿದೆ ಕೆಂಪು ಅಂತ

ಅಂದ ನಿನ್ನೆಯ ಅಂದ ಎಷ್ತಂಥ

ತಿಳಿವವರು ಯಾರಿಲ್ಲಿ ಇಲ್ಲಂತ

ಬಾರೋ ಬಾರೋ ಶಿಶಿರ ವಸಂತ


ತಿಂಗಳನಿಗೆ ಒಂದು ಬಣ್ಣ, ಮಂಗಳನಿಗೆ ಒಂದು ಬಣ್ಣ

ಭುವಿಗೆ ಮತ್ತೊಂದು ಬಣ್ಣ ಕೊಟ್ಟ ಸಂತ

ಎಲ್ಲ ಬಣ್ಣವ ಸೂರ್ಯನಲ್ಲಿ ಇತ್ತು ನಿಂತ

ಬಾ ಬಾರೋ ಕಲೆಗಾರ ಮತ್ತ ಮತ್ತ

ಶಿಶಿರಾದ ಬಾಳಿಗೆ......ಬಾ ವಸಂತ........

Thursday, June 16, 2011

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ......

ಮುನ್ನುಡಿ: ಕಳೆದ ೩೦ ವರ್ಷಗಳಲ್ಲಿ ನಮ್ಮ ದೇಶಕ್ಕೆ ಹಾಗು ಅದರ ಸ್ವಾತಂತ್ರ್ಯಕ್ಕೆ ಕುತ್ತು ಬರುವಂತ ಯಾವುದೇ ಘಟನೆ ನಡೆದಿಲ್ಲ. ಅಂದರೆ ನಮ್ಮ ತಾಯಿಯು ನಮ್ಮನು ಅಷ್ಟು ಸುಭದ್ರವಾಗಿ ಕಾಪಾಡುತ್ತಿದ್ದಾಳೆ.....ಅದರ ಫಲವಾಗಿ ಇಂದಿನ ಪೀಳಿಗೆಗೆ ದೇಶ ಎಂಬುದರ ಚಿತ್ರಣ ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ.ಎಲ್ಲೋ ನಾವೆಲ್ಲಾ "ದೇಶ" ಎಂಬ ಭಾವನೆ ಇಂದ ದೂರ ಹೊಗಿತ್ತಿದ್ದೇವೆ ಅಂತ ಅನಿಸುತ್ತಿದೆ.

ಹಾಗಾಗಿ ತಾಯಿಯೇ ನಮಗೆ ಒಂದಷ್ಟು ಕಷ್ಟವನ್ನು ಕೊಟ್ಟು ದೇಶದ ಕಡೆಗೆ ಸೆಳೆತ ಮೂಡಿಸುವಂತೆ ಕೇಳಿಕೊಳ್ಳಬೇಕು ಅಂತ ಅನಿಸುತ್ತಿದೆ.....



ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ

ನಿನ್ನ ಮಕ್ಕಳನು ನೀ ಬಿಗಿದಪ್ಪಿಕೋ

ಹುಂಬರು ಇವರೆಂದು ನೀ ಒಪ್ಪಿಕೊ

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ.....



ಚಂಡಿಯಾಗಿ ಛಡಿಯನು ಹಿಡಿದು

ದೂರ ಓಡುತಿರುವವರನು ತಡೆದು

ಮಕ್ಕಳನು ದಂಡಿಸಲು ನೀ ಒಪ್ಪಿಕೊ

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ



ಶತಮಾನಗಳಿಂದ ಇಲ್ಲೇ ಹುಟ್ಟಿದವರು ನಾವು

ಹುಟ್ತಲಿಕ್ಕಿನ ಮುಂಚೆ ದೇಶವನು ಕಟ್ಟಿದವರು ನಾವು

ಹೀಗೇಕೆ ಹೀಗಾದಿವೆನ್ದರಿತುಕೋ

ಮಕ್ಕಳನು ದಂಡಿಸಲು ನೀ ಒಪ್ಪಿಕೊ



ತಾಯಿ ಇಹಳು ಎಂದು, ನೀ ಹೇಳದಿದ್ದರೆ

ಇಲ್ಲೆಂದು ಅವರು ತಿಳಿದು...

ನಾ ನೀನು ಹೋಗಿ ಅವರೊಬ್ಬರಾಗಿ

ಇಲ್ಲೇ ಅಳಿದು....ಕಳಿದು....



ಗಾಬರಿಯು ಗೋಳ್ಳುವರು ಅವರು ಅಂದು

ಕಾಯುವವರು ಇಲ್ಲ ಎಂದು

ತಾಯಿಯು ಇಲ್ಲೇ ಇರುವಾಗಲೇ,

ನಾವು ಏಳಬೇಕು ಇಂದು...

ಆಕೆಯ ಸುತ್ತಲು ಎಲ್ಲ ಸೇರಿ

ಸ್ವರ್ಗ ಕಟ್ಟಲೆಂದು.....

ನಿಶೆಯ ಗರ್ಭ


ಯಾವ ಮಂಜಿದು ಮುತ್ತಿದೆ ನಮ್ಮನು

ಎಲ್ಲವೂ ತಣ್ಣಗಾಗಿದೆ

ಅಂದು ಚಿಗುರಿದ ಹಸಿರು ಗಿಡಗಳು

ಬರಲು ಬರಲು ಆಗಿವೆ.......



ಮಂಜಿನ ಗಡ್ದೆಗಳಡಿಯಲಿ ಎಷ್ಟೋ

ನೆನಪುಗಳು ಹೂದುಗೀ ಹೋಗಿವೆ

ಶಾಖವೆ ತಾಗದೆ, ಚಿಗುರದೆ, ಬೆಳೆಯದೆ

ಶವಗಳಾಗೀ ಹೋಗಿವೆ......



ತಣ್ಣನೆ ನಿಶೆಯ ಗರ್ಭದಿ ಒಂದು

ಬೆಂಕಿ ಉಂಡೆಯು ಬೆಳೆಯುತಿದೆ....

ಪ್ರಸವ ಸಮಯದಿ ಹೊರಗೆ ಬರುವನು

ನೇಸರನು ಎಂದು ಕಾಯುತಿದೆ.....



ಕಾಯಲೇ ಬೇಕು ಪ್ರಸವ ಸಮಯಕೆ

ಎಂದು ನೀನು ಅರಿತಿರು...

ಬೆಳಕು ಬರುವ ಸಮಯದಲ್ಲಿ

ನೀನು ಎದ್ದು ಕುಳಿತಿರು....



ನಿಶಾ ಮಾತೆಯ ಗರ್ಭದಿಂದ

ನೇಸರನು ಬಂದೇ ಬರುವನು.....

ಮಂಜು ಕರಗಿಸಿ, ಮೊಳಕೆ ಮೂಡಿಸಿ

ಬಾಳಿಗೆ ಬಣ್ಣವ ತರುವನು....

Friday, June 10, 2011

ತಬ್ಬಲಿ ತಾಯಿ….


ನಿಂತಿಹಳು ನೋಡಲ್ಲಿ ಒಬ್ಬ ತಾಯಿ

ಯಾಕಾದಳಾಕೆ, ತಬ್ಬಲಿ ತಾಯಿ….


ತಾ ಹಡೆದ ಎಲೆಗಳು

ತನ್ನನಗಲಿ

ಹಾರಿ ದೂರ ದೂರ......

ಬರ-ಬರಲು

ಆಕೆ ಒಡಲಾಗುತಿರಲು

ಬರಬಾರದೇನೋ ಪೋರ....


ಎಲೆ ಇರದೇ ಆಕೆ

ನಿಂತಿಹಳು ಯಾಕೆ

ಎಂದು, ನಿನ್ನ ನೀನು ಕೇಳು.....

ನಿನ್ನ ಹಡೆದ ಪಾಪ

ಆಕೆಯದ ಪಾಪ

ಎಂದು, ನೀನು ಹೇಳು.....


ತಾಯಿ ಬೇರು ನೋಡಿ

ಎಲ್ಲೆಲ್ಲಿ ಹರಡಿ

ಸಾರ ಸತ್ತ್ವ ಹೀರಿ.....

ಅದ ಉಂಡ ನೀನು

ಹಿಂಗಾದೆಯೇನು

ತಾಯಿಗೇನೆ ಆದೆ ಮಾರಿ....


ಎಷ್ಟು ಎತ್ತರೆತ್ತರಕೆ

ನೀನು ಬೆಳೆದರೂ

ಆಗಲಿಲ್ಲ ಸೂರ....

ನೀ ನೆನೆಯದಿರಲು

ಒಳಗೆ ಹೂತು ಹೋದ

ತಾಯಿ ಬೇರ ಸಾರ....