ಗರ್ಭಗುಡಿಯ ಓ ದೀಪವೆ ನಿನಗೆ
ಕಿವಿಮಾತೊಂದಾ ಕೇಳುವೆ
ನಿಜವನೆ ನೀನು ಹೇಳಬೇಕು
ಎಂದು ನಾನು ಬೇಡುವೆ
ಶಿವಪ್ಪನ ಗುಡಿಯಲಿ, ಅವನ ಬಗಲಲಿ
ನೀನು ಎಂದೂ ಕೂರುವೆ
ನಮ್ಮ ಬಸಪ್ಪನೇ ಹೊರಗೆ ಕೂತಿರಲು,
ನೀನು ಒಳಗೆ ಹೇಗೆ ಹೋಗುವೆ
ಇಷ್ಟು ಸನಿಹಕೆ ಅವನಿಗೆ ನೀನು ಹೋಗಲು ಏನು ಮಾಡಿದೆ?
ಹೋದ ಜನ್ಮದಲಿ ಯಾವ ಪುಣ್ಯವ ಮಾಡಿ ಹೀಗೆ ಆಗಿದೆ?
ನಾರಾಯಣಪ್ಪನಾ ಗುಡಿಯಲಿ ಹೋದರೆ
ಅಲ್ಲೂ ನೀನೇ ಕಾಣುವೆ
ಕಾಲಲ್ಲಿ ಕೂತಿರಲು ಲಕ್ಷ್ಮವ್ವ
ನೀನು ತೆಲೆಯ ಬದಿಯಲಿ ಕೂರುವೆ
ನೀನು ಹೀಗೆ ಆಗಲು, ಏನು ಏನು ಮಾಡಿದೆ
ನನಗೆ ಅದನು ಹೇಳಲೂ, ನಿನ್ನ ಗಂಟು ಕಳೆದು ಹೂಗುದೆ?
ಅಮ್ಮನ ಗುಡಿಯಲಿ ಅಮ್ಮನ ಮೇಲೇ
ಬೆಳಕನು ನೀನು ಚೆಲ್ಲುವೆ
ಆಕೆಯ ಜರತಾರಿಯ ಜರಿಗಳಿಗೆ
ಮೆರಗನು ನೀನು ನೀಡುವೆ
ದೀಪವೆ ನೀನು ಬೆಳಕಾಗಲು, ಯಾವ ತಪವನು ಮಾಡಿದೆ?
ಅಮ್ಮನ ಮೇಲೇ ಬೆಳಕು ಚೆಲ್ಲಲು, ಯಾರ ಕರುಣೆ ಕೋರಿದೆ?
ಮಗುವನು ಹೊತ್ತು ನಿಂತಿರೋ ತಾಯಿಯ
ಮೊಗದಲಿ ಮಿಂಚನು ಮುಡಿಸುವೆ
ಆ ಗರ್ಭ-ಗುಡಿಯಲೂ ನೀನೇ ಇರುವುದು
ಎಂದು ನಾನು ಹೇಳುವೆ
ಒಳಗೆ ಹೊತ್ತಿರುವ ದೀಪದ ಬೆಳಕು ಆಕೆ ಕಣ್ಣಲಿ ಕಾಣಲು
ಗರ್ಭಗುಡಿಯೋಳು ಕೂತಿರೋ ದೇವಗೆ ಅಲ್ಲವೇ ಆಕೆ ಸಮಾನಳು?
ನಿನ್ನ ಎಷ್ಟು ನೋಡಿದರೂ, ಎಷ್ಟು ನಿನ್ನ ಕೇಳಿದರೂ
ನೀನು ಯಾರು ಎಂಬುದೇ ತಿಳಿಯದು
ನೀ ಗುಡಿಯ ಗರ್ಭದಲಿ ಕೂರುವವನಾ?
ಗರ್ಭದ ಗುಡಿಯಲಿ ನೆಲೆಸುವವನಾ, ಎಂದು ಅರಿಯದು
ಇನ್ನೂ ನನಗೆ ಅರಿಯದು, ಎಂದು ನನಗೆ ಅರಿವುದು?
No comments:
Post a Comment